ನವದೆಹಲಿ: ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಹೇಳಿಕೆ ಬಗ್ಗೆ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಸದನದ ದಾರಿ ತಪ್ಪಿಸಿದ್ದಾರೆ ಎಂದು ಆರೋಪಿಸಿ, ರಾಜ್ಯಸಭೆಯಲ್ಲಿ ಕಾಂಗ್ರೆಸ್‌ನ ಮುಖ್ಯ ಸಚೇತಕ ಜೈರಾಮ್ ರಮೇಶ್ ಅವರು ಹಕ್ಕುಚ್ಯುತಿ ನೋಟಿಸ್ ನೀಡಿದ್ದಾರೆ.
ರಾಜ್ಯಸಭೆ ವ್ಯವಹಾರಗಳ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮ 188ರಡಿ ಅವರು ಈ ನೋಟಿಸ್ ನೀಡಿದ್ದಾರೆ.
'ಶಿವಕುಮಾರ್ ಅವರು ನೀಡಿದ್ದಾರೆ ಎನ್ನುವ ಸುಳ್ಳು ಹೇಳಿಕೆಗಳನ್ನು ನೀಡಿ ರಿಜಿಜು ಸದನವನ್ನು ದಾರಿ ತಪ್ಪಿಸಿದ್ದಾರೆ' ಎಂದು ರಾಜ್ಯಸಭೆ ಸಭಾಪತಿ ಜಗದೀಪ್ ಧನ್‌ಕರ್ ಅವರಿಗೆ ಸಲ್ಲಿಸಿದ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.
'ತಮ್ಮ ಬಗ್ಗೆ ಆರೋಪಿಸಲಾಗುತ್ತಿರುವ ಹೇಳಿಕೆಗಳು ಸುಳ್ಳು ಮತ್ತು ಅವಹೇಳನಕಾರಿ ಎಂದು ಡಿ.ಕೆ ಶಿವಕುಮಾರ್ ನಿರಾಕರಿಸಿದ್ದಾರೆ. ಆದ್ದರಿಂದ, ಕಿರಣ್ ರಿಜಿಜು ಅವರ ಹೇಳಿಕೆಗಳು ಸುಳ್ಳು ಮತ್ತು ದಾರಿತಪ್ಪಿಸುವಂತಿದ್ದು, ಇದು ಸದನದ ಹಕ್ಕುಚ್ಯುತಿ ಮತ್ತು ಸವಲತ್ತುಗಳ ಉಲ್ಲಂಘನೆಯಾಗಿದೆ' ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.
'ಸದನದಲ್ಲಿ ಸುಳ್ಳು ಮತ್ತು ದಾರಿತಪ್ಪಿಸುವ ಹೇಳಿಕೆಗಳನ್ನು ನೀಡುವುದು ಸವಲತ್ತು ಉಲ್ಲಂಘನೆ ಮತ್ತು ಸದನದ ಹಕ್ಕುಚ್ಯುತಿ ಎಂಬುದು ಇದರಿಂದ ಸ್ಥಾಪಿತವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ಕಿರಣ್ ರಿಜಿಜು ವಿರುದ್ಧ ಹಕ್ಕುಚ್ಯುತಿ ಪ್ರಕ್ರಿಯೆಗಳು ಆರಂಭಿಸಬೇಕು' ಎಂದು ರಮೇಶ್ ತಮ್ಮ ನೋಟಿಸ್‌ನಲ್ಲಿ ತಿಳಿಸಿದ್ದಾರೆ.
'ಮುಸ್ಲಿಮರಿಗೆ ಮೀಸಲಾತಿ ನೀಡಲು ನಮ್ಮ ಪಕ್ಷ ಸಂವಿಧಾನವನ್ನು ಬದಲಿಸಲಿದೆ ಎಂದು ಸಾಂವಿಧಾನಿಕ ಹುದ್ದೆ ಹೊಂದಿರುವ ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ' ಎಂದು ಡಿ.ಕೆ ಶಿವಕುಮಾರ್ ಅವರ ಹೆಸರನ್ನು ಉಲ್ಲೇಖಿಸದೆಯೇ ರಿಜಿಜು ರಾಜ್ಯಸಭೆಯಲ್ಲಿ ಹೇಳಿದ್ದರು.
'ಈ ಹೇಳಿಕೆಯನ್ನು ನಾವು ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ. ಸಾಮಾನ್ಯ ನಾಯಕನಿಂದ ಈ ಹೇಳಿಕೆ ಬಂದಿದ್ದಲ್ಲ. ಬದಲಾಗಿ ಸಾಂವಿಧಾನಿಕ ಹುದ್ದೆಯನ್ನು ಹೊಂದಿರುವ ವ್ಯಕ್ತಿಯಿಂದ ಬಂದಿದೆ' ಎಂದು ಅವರು ಹೇಳಿದ್ದರು.