ನವದೆಹಲಿ: 2023ರ ಅಕ್ಟೋಬರ್ 1ರಂದು ಅಥವಾ ಆ ನಂತರ ಜನಿಸಿದವರು ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವಾಗ ಹುಟ್ಟಿದ ದಿನಾಂಕ ದೃಢಪಡಿಸಲು ಜನನ ಪ್ರಮಾಣಪತ್ರವನ್ನೇ ಏಕೈಕ ಆಧಾರವಾಗಿ ಪರಿಗಣಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಇದಕ್ಕಾಗಿ ಪಾಸ್‌ಪೋರ್ಟ್‌ಗೆ ಸಂಬಂಧಿಸಿದ ನಿಯಮಗಳಿಗೆ ತಿದ್ದುಪಡಿ ತಂದಿದೆ.
1980ರ ಪಾಸ್‌ಪೋರ್ಟ್ ನಿಯಮಗಳಿಗೆ ತಿದ್ದುಪಡಿ ತಂದಿರುವ ಅಧಿಕೃತ ಟಿಪ್ಪಣಿಯನ್ನು ಸರ್ಕಾರ ಈ ವಾರ ಹೊರಡಿಸಿದೆ. ಟಿಪ್ಪಣಿಯನ್ನು ಅಧಿಕೃತವಾಗಿ ಗೆಜೆಟ್‌ನಲ್ಲಿ ಪ್ರಕಟಿಸಿದ ನಂತರ ಜಾರಿಗೆ ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜನನ -ಮರಣ ರಿಜಿಸ್ಟ್ರಾರ್, ಪಾಲಿಕೆ ಅಥವಾ ಜನನ ಮತ್ತು ಮರಣಗಳ ನೋಂದಣಿ ಕಾಯ್ದೆ-1969ರ ಅಡಿಯಲ್ಲಿ ಅಧಿಕಾರ ಹೊಂದಿರುವ ಯಾವುದೇ ಇತರ ಪ್ರಾಧಿಕಾರದಿಂದ ನೀಡಲಾದ ಜನನ ಪ್ರಮಾಣಪತ್ರಗಳನ್ನು ಜನ್ಮ ದಿನಾಂಕದ ಪುರಾವೆಯಾಗಿ ಸ್ವೀಕರಿಸಲಾಗುತ್ತದೆ ಎಂದು ಹೊಸ ನಿಯಮ ಹೇಳುತ್ತದೆ.
2023ರ ಅ.1ಕ್ಕೂ ಮುನ್ನ ಹುಟ್ಟಿದವರು ಚಾಲನಾ ಪರವಾನಗಿ ಅಥವಾ ಶಾಲಾ ವರ್ಗಾವಣೆ ಪತ್ರಗಳಂತಹ ಇತರ ದಾಖಲೆಗಳನ್ನು ಜನ್ಮ ದಿನದ ಪುರಾವೆಯಾಗಿ ಸಲ್ಲಿಸಬಹುದು.