ನವದೆಹಲಿ: ಬೇರೆ ಬೇರೆ ರಾಜ್ಯಗಳಲ್ಲಿನ ಮತದಾರರಿಗೆ ನೀಡಿರುವ ಗುರುತಿನ ಚೀಟಿಯಲ್ಲಿನ ಎಪಿಕ್ ಸಂಖ್ಯೆಯು ಒಂದೇ ಆಗಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಕೇಂದ್ರ ಚುನಾವಣಾ ಆಯೋಗವು, ಸಂಖ್ಯೆಯು ಒಂದೇ ಇದೆ ಎಂಬ ಕಾರಣಕ್ಕೆ ಅದನ್ನು ಹೊಂದಿರುವವರು ನಕಲಿ ಮತದಾರರು ಎನ್ನಲಾಗದು ಎಂದು ಹೇಳಿದೆ.
ಮತದಾರರ ಗುರುತಿನ ಚೀಟಿಯ (ಎಪಿಕ್) ಸಂಖ್ಯೆಗಳು ಒಂದೇ ಆಗಿರಬಹುದಾದರೂ, ಇತರ ವಿವರಗಳು ಒಂದೇ ಆಗಿರುವುದಿಲ್ಲ ಎಂದು ಆಯೋಗ ತಿಳಿಸಿದೆ. 'ಎಪಿಕ್ ಸಂಖ್ಯೆ ಏನೇ ಇರಬಹುದು. ಆದರೆ, ಮತದಾರರು ತಮಗೆ ನಿಗದಿ ಮಾಡಲಾದ ಮತಗಟ್ಟೆಯಲ್ಲಿ ಮಾತ್ರ ಮತ ಚಲಾಯಿಸಬಹುದು' ಎಂದು ಆಯೋಗವು ಸ್ಪಷ್ಟನೆ ನೀಡಿದೆ.
ವಿಕೇಂದ್ರೀಕೃತ ಹಾಗೂ ಕಂಪ್ಯೂಟರ್ ಆಧಾರಿತವಲ್ಲದ ವ್ಯವಸ್ಥೆಯ ಕಾರಣದಿಂದಾಗಿ ಒಂದೇ ಬಗೆಯ ಎಪಿಕ್ ಸಂಖ್ಯೆಗಳು ಬೇರೆ ಬೇರೆ ರಾಜ್ಯಗಳ ಮತದಾರರಿಗೆ ದೊರೆತಿವೆ. ಎಲ್ಲ ರಾಜ್ಯಗಳ ಮತದಾರರ ದತ್ತಾಂಶವನ್ನು ಎರೊನೆಟ್ ವ್ಯವಸ್ಥೆಗೆ ವರ್ಗಾವಣೆ ಮಾಡುವ ಮೊದಲು ಹೀಗಾಗಿದೆ ಎಂದು ಅದು ಹೇಳಿದೆ.
ಇದರಿಂದಾಗಿ ಕೆಲವು ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿಗಳು ಒಂದೇ ಸರಣಿಯ ಎಪಿಕ್ ಸಂಖ್ಯೆಗಳನ್ನು ಬಳಕೆ ಮಾಡಿದ್ದಾರೆ. ಹಾಗಾಗಿ, ಬೇರೆ ಬೇರೆ ರಾಜ್ಯಗಳ ಬೇರೆ ಬೇರೆ ವಿಧಾನಸಭಾ ಕ್ಷೇತ್ರಗಳ ಮತದಾರರಿಗೆ ಒಂದೇ ಎಪಿಕ್ ಸಂಖ್ಯೆ ಸಿಕ್ಕಿದೆ ಎಂದು ಹೇಳಿದೆ.
ಒಂದೇ ಎಪಿಕ್ ಸಂಖ್ಯೆ ನೀಡಿರುವುದನ್ನು ಸರಿಪಡಿಸಲಾಗುತ್ತದೆ. ವಿಶಿಷ್ಟ ಸಂಖ್ಯೆಗಳನ್ನೇ ನೀಡಲಾಗುತ್ತದೆ ಎಂದು ಆಯೋಗವು ಸ್ಪಷ್ಟಪಡಿಸಿದೆ.