ನವದೆಹಲಿ: ಬೆಂಗಳೂರು ಮೂಲದ ಡೀಪ್ ಟೆಕ್ ನವೋದ್ಯಮವೊಂದು ಉಷ್ಣಶಕ್ತಿಯ ಸಂಗ್ರಹಕ್ಕೆ ಹೊಸ ವ್ಯವಸ್ಥೆಯೊಂದನ್ನು ರೂಪಿಸಿದೆ. ಇದು ನವೀಕರಿಸಬಹುದಾದ ಇಂಧನವನ್ನು ಕೈಗಾರಿಕೆಯಲ್ಲಿ ಬಳಸಲು ಸಿದ್ಧವಿರುವ ಬಗೆಯಲ್ಲಿ ಇದೆ.
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (ಐಐಎಸ್‌ಸಿ) ವೊಲ್ಟಾನೊವಾ ಹೆಸರಿನ ಈ ನವೋದ್ಯಮವು ಮೈದಳೆದಿದೆ.
ಹೊಸ ವ್ಯವಸ್ಥೆಯು ಈಗ ಬಳಕೆಯಲ್ಲಿ ಇರುವ ಉಷ್ಣಶಕ್ತಿ ಸಂಗ್ರಹ ವ್ಯವಸ್ಥೆಗಳಿಗೆ ಅಗತ್ಯವಿರುವ ವೆಚ್ಚಕ್ಕೆ ಹೋಲಿಸಿದರೆ ಐದನೆಯ ಒಂದರಷ್ಟು ವೆಚ್ಚಕ್ಕೆ ಸಿದ್ಧವಾಗುತ್ತದೆ ಎಂದು ಕಂಪನಿ ಹೇಳಿದೆ.
ಈ ವ್ಯವಸ್ಥೆಯು ನೂರಕ್ಕೆ ನೂರರಷ್ಟು ಇಂಗಾಲಮುಕ್ತ ಇಂಧನವನ್ನು ಕೈಗಾರಿಕೆಗಳಿಗೆ ಒದಗಿಸುತ್ತದೆ ಎಂದು ಕೂಡ ಅದು ಹೇಳಿದೆ. 'ಈ ವ್ಯವಸ್ಥೆಯ ದಕ್ಷತೆಯು ಶೇಕಡ 95ರಷ್ಟಿದೆ' ಎಂಬುದು ಕಂಪನಿಯ ಹೇಳಿಕೆ.
ಪಾಣಿಪತ್ ಮತ್ತು ಫರೀದಾಬಾದ್‌ನಲ್ಲಿ ಜವಳಿ ಘಟಕಗಳನ್ನು ಹೊಂದಿರುವ ಆರ್‌ಎಂಪಿ ಸಮೂಹದ ಜೊತೆ ಈ ಕಂಪನಿ ಒಪ್ಪಂದ ಮಾಡಿಕೊಂಡಿದೆ. ಈ ವ್ಯವಸ್ಥೆಯು ಹೆಚ್ಚಿನ ಪ್ರಮಾಣದಲ್ಲಿ ಇಂಧನದ ಅಗತ್ಯವಿರುವ ಉಕ್ಕು, ಸಿಮೆಂಟ್, ಜವಳಿ, ಆಹಾರ ಮತ್ತು ಪಾನೀಯ, ರಾಸಾಯನಿಕ ಹಾಗೂ ಕಾಗದ ಉದ್ಯಮಕ್ಕೆ ಸೂಕ್ತವಾಗಿದೆ ಎಂದು ತಿಳಿಸಿದೆ.
ಕೈಗಾರಿಕಾ ಚಟುವಟಿಕೆಗಳಿಂದ ಇಂಗಾಲ ಹೊರಸೂಸುವಿಕೆಯು ಶೂನ್ಯಕ್ಕೆ ತಗ್ಗಬೇಕು ಎಂಬ ಗುರಿ ಇದೆ ಎಂದು ವೊಲ್ಟಾನೊವಾ ಕಂಪನಿಯ ಸಿಇಒ ಮತ್ತು ಸಹ ಸಂಸ್ಥಾಪಕ ಜೈಕಿ ಕುಮಾರ್ ಹೇಳಿದ್ದಾರೆ.