ನವದೆಹಲಿ: ವಿಮಾನಯಾನ ಸಂಸ್ಥೆಗಳು ಕೆಲ ಸಂದರ್ಭಗಳಲ್ಲಿ ಮನಸೋಇಚ್ಛೆ ಟಿಕೆಟ್ ದರ ಏರಿಸುತ್ತಿರುವುದಕ್ಕೆ ಕಡಿವಾಣ ಹಾಕಲು ಸಂಸದೀಯ ಸ್ಥಾಯಿ ಸಮಿತಿಯೊಂದು ಹಲವು ಸಲಹೆಗಳನ್ನು ನೀಡಿದೆ.
ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯಕ್ಕೆ (ಡಿಜಿಸಿಎ) ತಾತ್ಕಾಲಿಕ ದರ ನಿಗದಿ ಮಾಡುವ ಅಧಿಕಾರವನ್ನು ನೀಡಬೇಕು, ಟಿಕೆಟ್ ದರದ ಮೇಲೆ ನಿಗಾ ಇಡಲು ಕೃತಕ ಬುದ್ಧಿಮತ್ತೆ ಆಧಾರಿತ ಮೇಲ್ವಿಚಾರಣಾ ವ್ಯವಸ್ಥೆ ಜಾರಿ ಮಾಡಬೇಕು ಮತ್ತು ಮನಬಂದಂತೆ ಟಿಕೆಟ್ ದರ ಏರಿಸುವುದನ್ನು ರಿಪೋರ್ಟ್ ಮಾಡಲು ಮೊಬೈಲ್ ಆಯಪ್ ಅಭಿವೃದ್ಧಿಪಡಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.
ವಿಮಾನ ಪ್ರಯಾಣ ದರ ಏರಿಕೆ ಬಗ್ಗೆ ದೂರುಗಳು ಕೇಳಿಬರುತ್ತಿರುವ ಕಾರಣ ಸಾರಿಗೆ, ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಕುರಿತ ಸಮಿತಿಯು ಈ ಶಿಫಾರಸುಗಳನ್ನು ಮಾಡಿದೆ.
ಹಾಗೆಯೇ, ವಿಮಾನದ ಒಳವಿನ್ಯಾಸ ಮೇಲ್ವಿಚಾರಣೆಗಾಗಿ ವಿಮಾನಯಾನ ಒಳವಿನ್ಯಾಸ ಸಮಿತಿ ರಚನೆ ಮಾಡಬೇಕು ಎಂದು ಸಲಹೆ ನೀಡಿದೆ. ವಿಮಾನದ ಸೀಟುಗಳ ಬಗ್ಗೆ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ದೂರಿದ ಬೆನ್ನಲ್ಲೇ ಈ ಸಲಹೆ ನೀಡಿದೆ.