ತಿರುವನಂತಪುರಂ: ಕೊಚ್ಚಿಯ ಹಾಸ್ಟೆಲ್ ಮೇಲೆ ದಾಳಿ ಮಾಡಿದ ಪೊಲೀಸರು ಚಿಲ್ಲರೆ ಮಾರಾಟಕ್ಕೆ ಸಂಗ್ರಹಿಸಿದ್ದ ಸುಮಾರು 2 ಕೆಜಿಯಷ್ಟು ಗಾಂಜಾ ವಶಕ್ಕೆ ಪಡೆದಿದ್ದಾರೆ.
ಕಲಾಮಸ್ಸೇರಿ ಸರ್ಕಾರಿ ಪಾಲಿಟೆಕ್ನಿಕ್‌ನ ಬಾಲಕರ ವಿದ್ಯಾರ್ಥಿನಿಲಯದಲ್ಲಿ ಗಾಂಜಾ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇಲೆ ದಾಳಿ ಮಾಡಿ, ಗಾಂಜಾ ವಶಕ್ಕೆ ಪಡೆಯಲಾಗಿತ್ತು.
ಆಕಾಶ್ , ಅಭಿರಾಜ್ ಮತ್ತು ಆದಿತ್ಯ ಎಂಬುವರನ್ನು ಪೊಲೀಸರು ಬಂಧಿಸಿದ್ದರು.
ಆಡಳಿತಾರೂಢ ಸಿಪಿಎಂ ಬೆಂಬಲಿತ ಭಾರತೀಯ ವಿದ್ಯಾರ್ಥಿ ಸಂಘಟನೆ(ಎಸ್‌ಎಫ್‌ಐ) ಸ್ಥಳೀಯ ನಾಯಕ ಅಭಿರಾಜ್ ಗಾಂಜಾ ಪ್ರಕರಣದಲ್ಲಿ ಭಾಗಿಯಾಗಿರುವ ಕಾರಣಕ್ಕೆ ಇದು ರಾಜಕೀಯ ತಿರುವು ಪಡೆದಿದೆ.
ಅಭಿರಾಜ್ ತನ್ನ ಮೇಲಿನ ಆರೋಪ ತಳ್ಳಿಹಾಕಿದ್ದು ಕಾಂಗ್ರೆಸ್ ವಿದ್ಯಾರ್ಥಿ ಸಂಘಟನೆಯ(ಕೆಎಸ್‌ಯು) ಕಾರ್ಯಕರ್ತರು ನನ್ನ ಕೊಠಡಿಯಲ್ಲಿ ಗಾಂಜಾ ತಂದಿಟ್ಟಿದ್ದಾರೆ ಎಂದು ಹೇಳಿದ್ದರು. ಆದರೆ, ಕೆಎಸ್‌ಯು ಇದನ್ನು ನಿರಾಕರಿಸಿದೆ.
ಕೇರಳದಲ್ಲಿ ವಿದ್ಯಾರ್ಥಿಗಳು ಮಾದಕ ವ್ಯಸನದಿಂದಾಗಿ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಈ ಸಂಬಂಧ ಕುಲಪತಿಗಳ ಸಭೆ ಕರೆದಿದ್ದ ಕುಲಾಧಿಪತಿಯೂ ಆದ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರು ವಿಶೇಷ ಕಾರ್ಯಾಚರಣೆಗೆ ಸೂಚಿಸಿದ್ದರು. ಮೂರು ವಾರಗಳಲ್ಲಿ ವಿದೇಶಿಯರು ಸೇರಿ 4000ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದ ಪೊಲೀಸರು, ಬಹುತೇಕ ವಿದ್ಯಾರ್ಥಿಗಳು ಗಾಂಜಾ ಮಾರಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ್ದರು.