ಸಂಭಲ್ : 'ರಂಜಾನ್ ಸಂದರ್ಭದಲ್ಲಿ ರಸ್ತೆ, ಕಟ್ಟಡಗಳ ತಾರಸಿ ಮೇಲೆ ನಮಾಜ್ ಮಾಡುವುದನ್ನು ನಿಷೇಧಿಸಲಾಗಿದೆ' ಎಂದು ಸಂಭಲ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀಶ ಚಂದ್ರ ಗುರುವಾರ ತಿಳಿಸಿದ್ದಾರೆ. ಅವಘಡ ನಡೆಯದಂತೆ ತಡೆಯುವುದು ಇದರ ಉದ್ದೇಶ ಎಂದು ಹೇಳಿದ್ದಾರೆ.
'ಅಲ್ವಿದಾ' (ರಂಜಾನ್ ಮಾಸದ ಕೊನೆಯ ಶುಕ್ರವಾರ ನಡೆಯುವ ಪ್ರಾರ್ಥನೆ) ಸಿದ್ಧತೆ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಅವರು, 'ಕಾನೂನು ಸುವ್ಯವಸ್ಥೆ ರಕ್ಷಣೆಗಾಗಿ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ' ಎಂದರು.
'ತಾರಸಿಯಲ್ಲಿ ನಮಾಜ್ ಮಾಡಬಹುದೇ ಎಂದು ಶಾಂತಿ ಸಮಿತಿ ಸಭೆಯಲ್ಲಿ ಕೇಳಿಬಂದ ಪ್ರಶ್ನೆಗೆ, ಹೆಚ್ಚಿನ ಜನ ಸೇರಿದಲ್ಲಿ ಅವಘಡ ಸಂಭವಿಸಬಹುದು ಎಂದು ಮನವರಿಕೆ ಮಾಡಲಾಗಿದೆ' ಎಂದು ತಿಳಿಸಿದರು.
ಸಾಂಪ್ರದಾಯಿಕವಾಗಿ ಮಸೀದಿಗಳು ಮತ್ತು ಈದ್ಗಾ ಆವರಣದಲ್ಲಿ ನಮಾಜ್ ಮಾಡಲು ಯಾವುದೇ ನಿರ್ಬಂಧ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.