ಬದಿಯಡ್ಕ: ಧನ ಸಂಪಾದನೆಯಿಂದ ಮಾತ್ರ ಎಲ್ಲವನ್ನೂ ಗಳಿಸಿ ನೆಮ್ಮದಿ ಪಡೆಯಬಹುದೆಂಬುದು ಹುರುಳಿಲ್ಲದ ವಾದ. ದೇವಾಲಯಗಳಂತಹ ಶ್ರದ್ಧಾಕೇಂದ್ರಗಳ ಪುನಃ ನಿರ್ಮಾಣದಲ್ಲಿ ಅಸಂಖ್ಯ ಸಂಖ್ಯೆಯ ಭಜಕರ ಫಲಾಪೇಕ್ಷೆ ರಹಿತ ಭಕ್ತಿ ಪುರಸ್ಸರವಾದ ಸೇವಾಕಾರ್ಯ ಹಣದಿಂದ ಮಾಡಲಾಗದ್ದನ್ನು ಸಾಕಾರಗೊಳಿಸುತ್ತಿದೆ. ಇದು ಸಂಪತ್ತಿನ ಸದ್ವಿನಿಯೋಗ, ಆ ಮೂಲಕ ಒಗ್ಗಟ್ಟು, ಕೂಡಿ ಬಾಳುವ ಸುಸ್ಥಿರ ಸಮಾಜ ವ್ಯವಸ್ಥೆಯ ಪ್ರತೀಕ ಎಂದು ಶ್ರೀಮದ್ ಎಡನೀರು ಮಠದ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ಅನುಗ್ರಹ ಸಂದೇಶ ನೀಡಿ ಆಶೀರ್ವದಿಸಿದರು.
ನೀರ್ಚಾಲು ಸಮೀಪದ ಮಾನ್ಯ ಕಾರ್ಮಾರು ಶ್ರೀಮಹಾವಿಷ್ಣು ದೇವಾಲಯದಲ್ಲಿ ಮಾ.1 ರಿಂದ ಮೊದಲ್ಗೊಂಡು ನಡೆದ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಭಾನುವಾರ ಸಂಜೆ ನಡೆದ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಅನುಗ್ರಹ ಸಂದೇಶ ನೀಡಿದ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರು, ಸತ್ಕರ್ಮ ಮತ್ತು ದುಷ್ಕಮಗಳೇರಡೂ ಸಮಾಜದಲ್ಲಿ ಜೊತೆಜೊತೆಗೆ ಸಾಗುವಂತದ್ದು. ಆದರೆ, ಸತ್ಕರ್ಮ, ದೇವತಾ ಚಟುವಟಿಕೆಗಳಿಗೆ ಮಾತ್ರ ಸಾಮಾಜಿಕ ಬೆಂಬಲ ಮತ್ತು ದೈವಾನುಗ್ರಹದ ಪ್ರಾಪ್ತಿ ಲಭಿಸುವುದು. ಮಹಾವಿಷ್ಣು ಒಂದೊಂದು ಅವತಾರಗಳಲ್ಲೂ ಧರ್ಮಸ್ಥಾಪನೆಯ ಮಜಹಾ ಸಂಕಲ್ಪದಿಂದ ಜನಿಸಿದ ಸರ್ವಾಧ್ಯಕ್ಷ. ಮಹಾತಾಪಸಿಗಳಾದ ಭೃಗು ಮಹರ್ಷಿಗಳ ಪಾದದ ಗುರುತನ್ನೂ ತಾನು ಸ್ವೀಕರಿಸಿ ಕ್ಷಮಾ ಗುಣದ ಮಹಾನ್ ಶಕ್ತಿಯಾಗಿ ಮಹಾವಿಷ್ಣು ತೋರಿಸಿಕೊಟ್ಟಿದ್ದಾನೆ. ಇದು ಇಂದಿನ ಸಮಾಜ ವ್ಯವಸ್ಥೆಗೆ ಸ್ವೀಕಾರಾರ್ಹ ಅಂಶವಾಗಿದೆ. ಧರ್ಮಾಧರ್ಮ ವಿವೇಚನೆ ಬದುಕಿನ ಮುಖ್ಯಸೂತ್ರಗಳಾಗಬೇಕು ಎಂದವರು ತಿಳಿಸಿದರು.
ಟ್ರಸ್ಟಿ ರಾಮ.ಕೆ.ಕಾರ್ಮಾರು ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಉದ್ಯಮಿ ಆರ್.ಕೆ.ಭಟ್. ಬೆಂಗಳೂರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು.. ಈ ಸಂದರ್ಭ ತಂತ್ರಿವರ್ಯ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿ, ದೈವಜ್ಞ ಕೇಶವ ಭಟ್ ನೆಲ್ಲಿಕಳೆಯ ಹಾಗೂ ಶಿಲ್ಪಿ ವಿಜಯ ಉಪ್ಪಿನಂಗಡಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಮಲಬಾರ್ ದೈವಸ್ವಂ ಬೋರ್ಡ್ ಜಿಲ್ಲಾ ಚೇರ್ಮೆನ್ ಸುರೇಂದ್ರನ್ ಕೆ.ವಿ., ಏರಿಯಾ ಸಮಿತಿ ಸದಸ್ಯ ಎ.ಕೆ.ಶಂಕರನ್ ಆದೂರು, ಶ್ರೀಕ್ಷೇತ್ರದ ಮಾಜಿ ಪ್ರಧಾನ ಅರ್ಚಕ ನಾರಾಯಣ ಭಟ್ ಕಾರ್ಮಾರು, ಟ್ರಸ್ಟಿ ಗೋಪಾಲ ಭಟ್.ಪಿ.ಎಸ್. ಪಟ್ಟಾಜೆ ಉಪಸ್ಥಿತರಿದ್ದು ಮಾತನಾಡಿದರು. ಜೀಣೋದ್ಧಾರ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ಪುದುಕೋಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಮಹೇಶ್ ವಳಕ್ಕುಂಜ ವಂದಿಸಿದರು. ಪತ್ರಕರ್ತ ಪುರುಷೋತ್ತಮ ಭಟ್.ಪುದುಕೋಳಿ ಕಾರ್ಯಕ್ರಮ ನಿರೂಪಿಸಿದರು. ಮಹೇಶ್ ವಳಕ್ಕುಂಜ, ಸುಂದರ ಶೆಟ್ಟಿ ಕೊಲ್ಲಂಗಾನ ಹಾಗೂ ಸಂತೋಷ್ ಕುಮಾರ್ ಮಾನ್ಯ ಅಭಿನಂದನಾ ಪತ್ರ ವಾಚಿಸಿದರು.
ಬಳಿಕ ಮಹಿಳಾ ಸಮಿತಿ ಮಾನ್ಯ ತಂಡದವರಿಂದ ಮೆಗಾ ತಿರುವಾದಿರ,ಸಾನ್ವಿ ರಾಜೇಶ್ ಉಡುಪಿ ಅವರಿಂದ ಭರತನಾಟ್ಯ ಪ್ರದರ್ಶನ, ಕಾರ್ಮಾರು ಶ್ರೀವಿಷ್ಣುಲೀಲಾ ಮೈದಾನದಲ್ಲಿ ಕಾರ್ಮಾರು ಉತ್ಸವ 2025, ಶ್ರೀದೇವರ ಉತ್ಸವ ಬಲಿ, ಶ್ರೀದೇವರ ಪೂಜೆ, ಸುಡುಮದ್ದು ಪ್ರದರ್ಶನ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಮಂತ್ರಾಕ್ಷತೆಯೊಂದಿಗೆ 9 ದಿನಗಳ ಪುನಃಪ್ರತಿಷ್ಠಾ ಬ್ರಹ್ಮಕಲಶ ಮಹೋತ್ಸವ ಸಹಸ್ರಾರು ಸಂಖ್ಯೆಯ ಭಕ್ತರ ಪಾಲ್ಗೊಳ್ಳುವಿಕೆಯೊಂದಿಗೆ ಸಮಾರೋಪಗೊಂಡಿತು.