HEALTH TIPS

ಆತ್ಯಂತಿಕ ಲಕ್ಷ್ಯದ ಬೆಳಕು ಕಾಣಲು ತೆರೆದುಕೊಳ್ಳಬೇಕು-ಅದಮಾರು ಮಠಾಧೀಶರಿಂದ ಅನುಗ್ರಹ ಸಂದೇಶ: ಮಧೂರು ಬ್ರಹ್ಮಕಲಶೋತ್ಸವ ಸಭಾ ಕಾರ್ಯಕ್ರಮ

Top Post Ad

Click to join Samarasasudhi Official Whatsapp Group

Qries

ಮಧೂರು: ಶುದ್ಧ ಹೃದಯದ ನಾಮಸ್ಮರಣೆಯೇ ಭಗದಂತನ ಪ್ರೀತಿಯ ಆರಾಧನಾ ರೂಪವಾಗಿದ್ದು, ಅಛಲ ಭಕ್ತಿಗೆ ದೈವಾನುಗ್ರಹ ನಿರೀಕ್ಷೆಗೂ ಮೀರಿ ಒದಗಿಬರುತ್ತದೆ ಎಂದು ಉಡುಪಿ ಅದಮಾರು ಮಠದ ಈಶಪ್ರಿಯ ತೀರ್ಥ ಶ್ರೀಪಾದರು ಆಶೀರ್ವಚನದಲ್ಲಿ ನುಡಿದರು.

ಮಧೂರು ಶ್ರೀಮದನಂತೇಶ್ವರ ಸಿದ್ದಿವಿನಾಯಕ ದೇವಾಲಯದಲ್ಲಿ ಗುರುವಾರ ಆರಂಭಗೊಂಡ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪಸೇವೆಯ ಅಂಗವಾಗಿ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಶ್ರೀಗಳು ಆಶೀರ್ವಚನ ನೀಡಿ ಹರಸಿದರು.


ಭಕ್ತಿಗೆ ಮಾತ್ರ ಒಲಿಯುವ ಭಗವಂತ ಜ್ಞಾನ ಚಕ್ಷುಗಳ ಮೂಲಕ ಬದುಕಿನ ಆತ್ಯಂತಿಕ ಲಕ್ಷ್ಯದ ಬಗ್ಗೆ ಬೆಳಕು ತೋರುತ್ತಾನೆ.ಆದರೆ ಅದನ್ನು ಗ್ರಹಿಸುವ ಶಕ್ತಿ ನಮ್ಮ ಅಂತಃಶಕ್ತಿಗೆ ಗೋಚರಿಸಬೇಕು. ಸಮಾಜ, ಸಂಸಾರ ಸುದೃಢಗೊಳ್ಳಲು ಎಲ್ಲರ ಸಹಭಾಗಿತ್ವದೊಂದಿಗೆ ಆರಾಧನಾಲಯಗಳು ಬೆಳೆಯಬೇಕೆಂದು ಅವರು ತಿಳಿಸಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀಗುರುದೇವಾನಂದ ಸ್ವಾಮೀಜಿ ಆಶೀರ್ವಚನಗೈದು, ಆನಂದ ಆಂತರಂಗಿಕವಾದುದಾಗಿದ್ದು, ಸಂತೋಷ ಬಾಹ್ಯ ಭಾವ ಸ್ಪುರಣವಾಗಿದೆ. ನಮ್ಮಲ್ಲಿರಬೇಕಾದುದು ಶಾಶ್ವತ, ಒಳಭಾವಗಳ ಆನಂದವಾಗಿದೆ. ಅದು ದೈವಾನುಗ್ರಹದಿಂದ ಮಾತ್ರ ಸಾಧ್ಯ. ಬದುಕಿನ ಮೂಲಸೂತ್ರ ಧರ್ಮದ ಹಾದಿಯಾಗಿದ್ದು, ಆ ಹಾದಿ ನಮ್ಮನ್ನು ದೇವತಾ ಮನುಷ್ಯರನ್ನಾಗಿಸುತ್ತದೆ ಎಂದರು. 


ಜೀವ, ಆತ್ಮಗಳ ಸೂಕ್ಷ್ಮ ವ್ಯವಸ್ಥೆ ದೇವಾಲಯಗಳ ಅಂತರಂಗವಾಗಿದ್ದು, ಭಕ್ತಿ ಮಾರ್ಗಕ್ಕೆ ಶಕ್ತಿತುಂಬುವ ತೈಲ ದೇವಾಲಯಗಳಿಂದ ವ್ಯಕ್ತಿ, ಸಮಾಜಕ್ಕೆ ಲಭ್ಯವಾಗುತ್ತದೆ  ಎಂದು ಶ್ರೀಧಾಮ ಮಾಣಿಲದ ಶ್ರೀಮೋಹನದಾಸ ಪರಮಹಂಸ ಸ್ವಾಮೀಜಿ ದಿವ್ಯ ಉಪಸ್ಥಿತರಿದ್ದು ಆಶೀರ್ವಚನದಲ್ಲಿ ತಿಳಿಸಿದರು. ದೇವಾಲಯ, ದೇವತಾ ಕಾರ್ಯಗಳಲ್ಲಿ ವಿಕೃತ ಭಾವ, ಸ್ವಾರ್ಥ ಲಾಲಸೆಗಳು ಅಧಃಪತನಕ್ಕೆ ಕಾರಣವಾಗುತ್ತದೆ. ವ್ಯಾಮೋಹದ ಬಲೆ ಹರಿದು ಸಕಲರ ಒಳಿತಿಗೆ ತೆರೆದುಕೊಳ್ಳುವ ಮನೋಸ್ಥಿತಿ ನಮ್ಮದಾಗಲಿ ಎಂದು ತಿಳಿಸಿದರು.

ಮಧೂರು ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಗೋಪಾಲಕೃಷ್ಣ ಅವರು ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಪ್ರಧಾನ ಉಪನ್ಯಾಸ ನೀಡಿದ ಆರ್.ಎಸ್.ಎಸ್.ಅಖಿಲ ಭಾರತ ಪ್ರತಿನಿಧಿ ಸಭಾದ ಆಮಂತ್ರಿತ ಸದಸ್ಯ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅವರು ಮಾತನಾಡಿ, ಗಣಪತಿಯನ್ನು ಮಿಥ್(ಕಲ್ಪನೆ) ಎಂದು ಕರೆದ ಜನನಾಯಕರಿರುವ ಇಂದಿನ ನವ ಸಮಾಜಕ್ಕೆ ವಿಘ್ನಕರನೂ, ವಿಘ್ನ ಹರನೂ ಆದ ಆ ತತ್ವದ ನೈಜತೆಯನ್ನು ತೋರಿಸುವ ಪ್ರಯತ್ನಗಳಾಗಬೇಕು. ಭಾರತೀಯ ಪ್ರಾಚೀನ ಪರಂಪರೆಯಲ್ಲಿ ಸಕಲ ಜ್ಞಾನಗಳೂ ಅಡಗಿದ್ದು, ಅದನ್ನು ಹೊಸ ಜನತೆಗೆ ಕಲಿಸುವ, ಶಕ್ತಿ ಬಿಂಬಿಸುವ ಪ್ರಯತ್ನಗಳಾಗಬೇಕು ಎಂದರು. ಧರ್ಮ, ಪ್ರಜಾ ಸಿದ್ಧ್ಯರ್ಥಂ ಎಂಬ ನಮ್ಮ ಪಾರಂಪರಿಕ ವಿವಾಹಪೂರ್ವ ಸಂಕಲ್ಪಗಳು ಇಂದು ಮಾಸುತ್ತಿರುವುದು ಆತಂಕಕಾರಿಯಾದುದು. ‘ನಾನೆಂಬ’ ಭಾವ ಮರೆಯಾಗಿ ‘ನಾವೆಂಬ’ ಸಮಷ್ಠಿ ಪ್ರಜ್ಞೆಯೇ ಭರತ ಖಂಡದ ಅಂತರಂಗ. ಹಂಚಿ ತಿನ್ನುವ, ಹಲವರೊಂದಿಗೆ ಒಂದಾಗಿ ಬದುಕುವ ವಿಶಾಲತೆ ನಮ್ಮಲ್ಲಿರಬೇಕು. ದೇವಾಲಯಗಳು, ಶಿಕ್ಷಣ ಕೇಂದ್ರಗಳು ಈ ನಿಟ್ಟಿನಲ್ಲಿ ಮಾನವ ಪ್ರಜ್ಞೆ, ಸಕಲರೊಂದಿಗೆ ನಿಷ್ಕಲ್ಮಷ ಪ್ರೇಮ, ಆಧ್ಯಾತ್ಮಕ ಶಕ್ತಿಯ ತೋರ್ಬೆರಳುಗಳಾಗಿ ಬೆಳಗಬೇಕು ಎಂದು ಕರೆ ನೀಡಿದರು.

ಬ್ರಹ್ಮಕಲಶೋತ್ಸವ ಸಮಿತಿ ಗೌರವ ಉಪಾಧ್ಯಕ್ಷ, ಉದ್ಯಮಿ ಬಿ.ಕೆ.ಮಧೂರು, ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ, ಡಾ.ಹರಿಕೃಷ್ಣ ಬಂಗೇರ, ಏವಂದೂರು ಗೋಪಾಲ ಮಣಿಯಾಣಿ, ಸಿ.ಎಚ್. ಧರ್ಮಪಾಲ ಚೀನಕ್ಕೋಡು ಉಪಸ್ಥಿತರಿದ್ದು ಶುಭಹಾರೈಸಿ ಮಾತನಾಡಿದರು. 

ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಗಿರೀಶ್ ಸಂಧ್ಯಾ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಬ್ಲಾ.ಪಂ. ಸದಸ್ಯ, ಸಮಿತಿ ಸದಸ್ಯ ಸುಕುಮಾರ ಕುದ್ರೆಪ್ಪಾಡಿ ವಂದಿಸಿದರು. ಮೋಹನ್ ಕುಮಾರ್ ಅಡ್ಕ ಕಾರ್ಯಕ್ರಮ ನಿರೂಪಿಸಿದರು.


ರಾತ್ರಿ ಮಧೂರು ಶ್ರೀಸಿದ್ದಿವಿನಾಯಕ ಬಾಲಗೋಕುಲ ಮಕ್ಕಳಿಂದ ನೃತ್ಯ ವೈವಿಧ್ಯ, ಬೆಂಗಳೂರಿನ ನೃತ್ಯಕುಟೀರದ ವಿದುಷಿಃ ದೀಪಾ ಭಟ್ ಅವರಿಂದ ಭರತನಾಟ್ಯ ಪ್ರದರ್ಶನ ನಡೆಯಿತು.

  


Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries