ಬದಿಯಡ್ಕ:ಧಾರ್ಮಿಕ ಶ್ರದ್ಧಾಕೇಂದ್ರಗಳು ಅಭಿವೃದ್ಧಿಗೊಂಡಂತೆ ಸಮಾಜ ಸುಸ್ಥಿರಗೊಳ್ಳುತ್ತದೆ. ಆರಾಧನಾಲಯಗಳು ಹಿಂದೂ ಶಕ್ತಿ ಕೇಂದ್ರಗಳಾಗಿ ಸಮಾಜ, ವ್ಯಕ್ತಿಯ ಸಮಗ್ರ ಬೆಳವಣಿಗೆಗೆ ಒಗ್ಗಟ್ಟಿನ ಚಟುವಟಿಕೆಗಳ ಮೂಲಕ ಶ್ರೇಯಸ್ಸಿಗೆ ಭೂಮಿಕೆಯಾಗುತ್ತದೆ ಎಂದು ತಂತ್ರಿವರ್ಯ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಅಭಿಪ್ರಾಯ ವ್ಯಕ್ತಪಡಿಸಿದರು.
ನೀರ್ಚಾಲು ಮಾನ್ಯ ಸಮೀಪದ ಕಾರ್ಮಾರು ಮಹಾವಿಷ್ಣು ದೇವಾಲಯದಲ್ಲಿ ನಡೆಯುತ್ತಿರುವ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಭಾನುವಾರ ಸಂಜೆ ಶ್ರೀಕ್ಷೇತ್ರದ ಸಾಂಸ್ಕøತಿಕ ವೇದಿಕೆಯಲ್ಲಿ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಉದ್ಯಮಿ ನಿತ್ಯಾನಂದ ಶೆಣೈ ಬದಿಯಡ್ಕ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಡಿ.ಎನ್.ಮಾನ್ಯ ಕಾರ್ಕಳ ಧಾರ್ಮಿಕ ಉಪನ್ಯಾಸ ನೀಡಿದರು. ಕೊಡುಗೈ ದಾನಿ ಕುಂಜಾರು ವೆಂಕಟೇಶ್ವರ ಭಟ್ ಮೈಸೂರು, ಹರಿಪ್ರಸಾದ್ ಎಂ.ಜೆ.ಪಾಡಿ ಅರಮನೆ, ಡಾ.ಜನಾರ್ಧನ ನಾಯ್ಕ್ ಸಿ.ಎಚ್. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ತಂತ್ರಿ ಗಣಾಶಧಿರಾಜ ಉಪಾಧ್ಯಾಯ ಕೊಲ್ಲಂಗಾನ ಗೌರವ ಉಪಸ್ಥಿತಿಯಲ್ಲಿ ನಡೆದ ಸಮಾರಂಭದಲ್ಲಿ ನಾರಾಯಣ ಮಾಸ್ತರ್ ಚರ್ಲಡ್ಕ, ಸುರೇಂದ್ರನ್ ಕಾಸರಗೋಡು, ವೆಂಕಟಗಿರೀಶ ಪಟ್ಟಾಜೆ, ಶ್ರೀಕೃಷ್ಣ ಭಟ್ ವಳಕ್ಕುಂಜ ಉಪಸ್ಥಿತರಿದ್ದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ಪುದುಕೋಳಿ ಸ್ವಾಗತಿಸಿ, ವಿನಯ ಕಾರ್ಮಾರು ವಂದಿಸಿದರು. ಗಣೇಶ್ ಭಟ್ ಪಟ್ಟಾಜೆ ಕಾರ್ಯಕ್ರಮ ನಿರೂಪಿಸಿದರು.