ನವದೆಹಲಿ : ಮತಪತ್ರಗಳ ಮೂಲಕ ಚುನಾವಣೆ ನಡೆಸುವ ವಿಚಾರವು 'ಒಂದು ದೇಶ, ಒಂದು ಚುನಾವಣೆ'ಗೆ ಸಂಬಂಧಿಸಿದಂತೆ ರಚಿಸಲಾಗಿರುವ ಜಂಟಿ ಸಂಸದೀಯ ಸಮಿತಿಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಕೇಂದ್ರ ಕಾನೂನು ಸಚಿವಾಲಯ ತಿಳಿಸಿದೆ.
ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವುದಕ್ಕೆ ಸಂಬಂಧಿಸಿದ ಎರಡು ಮಸೂದೆಗಳನ್ನು ಪರಿಶೀಲಿಸುವ ಜಂಟಿ ಸಂಸದೀಯ ಸಮಿತಿಯ ಕೆಲವು ಸದಸ್ಯರು, ಮತಪತ್ರಗಳ ಮೂಲಕ ಚುನಾವಣೆ ನಡೆಸುವ ಹಳೆಯ ವ್ಯವಸ್ಥೆಗೆ ಮರಳಬೇಕು ಎಂಬ ಸಲಹೆ ಮಾಡಿದ್ದರು.
ಕಾನೂನು ಸಚಿವಾಲಯವು ಆ ಸಲಹೆಗೆ ಲಿಖಿತ ಉತ್ತರ ನೀಡಬೇಕಿತ್ತು.
ಸಮಿತಿಯ ಸದಸ್ಯರು ಕೇಳಿರುವ ವಿವಿಧ ಪ್ರಶ್ನೆಗಳಿಗೆ ಕಾನೂನು ಸಚಿವಾಲಯದ ಶಾಸನ ರಚನಾ ವಿಭಾಗವು ವಿವರವಾದ ಪ್ರತಿಕ್ರಿಯೆ ನೀಡಿದರೆ, ಮತಪತ್ರ ವ್ಯವಸ್ಥೆಗೆ ಮರಳುವುದಕ್ಕೆ ಸಂಬಂಧಿಸಿದ ಸಲಹೆಗೆ ನೇರ ಉತ್ತರವನ್ನು ನೀಡಲಿಲ್ಲ.
ಮತಪತ್ರ ಬಳಕೆ ಕುರಿತ ಸಲಹೆಯು ಜಂಟಿ ಸಂಸದೀಯ ಸಮಿತಿಯ 'ವ್ಯಾಪ್ತಿಯಿಂದ ಹೊರಗಿದೆ' ಎಂದು ಸಚಿವಾಲಯವು ಹೇಳಿರುವುದಾಗಿ ತಿಳಿದುಬಂದಿದೆ.
'ಮತದಾನದ ವೇಳೆ ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ಬಳಸಬೇಕೇ ಅಥವಾ ಮತಪತ್ರಗಳನ್ನು ಬಳಸಬೇಕೇ ಎಂಬುದು ಸಮಿತಿಯು ಪರಿಶೀಲಿಸುವಂತಹ ವಿಷಯ ಅಲ್ಲ' ಎಂದು ಹೇಳಿದೆ.
'ಒಂದು ರಾಷ್ಟ್ರ, ಒಂದೇ ಚುನಾವಣೆ'ಗೆ ಸಂಬಂಧಿತ 'ಸಂವಿಧಾನ (129ನೇ ತಿದ್ದುಪಡಿ) ಮಸೂದೆ ಹಾಗೂ 'ಕೇಂದ್ರ ಪ್ರಾಂತ್ಯವಾರು ಕಾಯ್ದೆಗಳು (ತಿದ್ದುಪಡಿ)' ಮಸೂದೆಯನ್ನು ಸರ್ಕಾರ ಈಚೆಗೆ ಲೋಕಸಭೆಯಲ್ಲಿ ಮಂಡಿಸಿತ್ತು.
ಈ ಮಸೂದೆಗಳು 'ಏಕಕಾಲದಲ್ಲಿ ಚುನಾವಣೆ' ನಡೆಸುವ ವ್ಯವಸ್ಥೆಯನ್ನು ಜಾರಿಗೊಳಿಸಲು ಸಮರ್ಥವಾಗಿವೆಯೇ ಅಥವಾ ಬದಲಾವಣೆಗಳ ಅಗತ್ಯವಿದೆಯೇ ಎಂಬುದರ ಕುರಿತ ವರದಿಯನ್ನು ಜಂಟಿ ಸಂಸದೀಯ ಸಮಿತಿ ನೀಡಲಿದೆ.