ನವದೆಹಲಿ: ನಾಮಮಾತ್ರದ ಶಾಲೆಗಳಲ್ಲಿ ಅಭ್ಯಾಸ ಮಾಡಿದ ವಿದ್ಯಾರ್ಥಿಗಳಿಗೆ 12ನೇ ತರಗತಿಯ ಪರೀಕ್ಷೆಯನ್ನು ಬರೆಯಲು ಅವಕಾಶ ಇಲ್ಲ ಎಂದು ಸಿಬಿಎಸ್‌ಇ ಅಧಿಕಾರಿಗಳು ತಿಳಿಸಿದ್ದಾರೆ. ಇಂತಹ ಶಾಲೆಗಳಿಗೆ ಪ್ರವೇಶ ಪಡೆದಿದ್ದರೆ ಅದಕ್ಕೆ ವಿದ್ಯಾರ್ಥಿಗಳು ಮತ್ತು ಪಾಲಕರೇ ಹೊಣೆ ಎಂದು ಮಂಡಳಿ ಸ್ಪಷ್ಟಪಡಿಸಿದೆ.
ನಾಮಮಾತ್ರದ ಶಾಲೆಗಳ ವಿರುದ್ಧ ಕ್ರಮ ಜರುಗಿಸುವುದರ ಭಾಗವಾಗಿ ಮಂಡಳಿಯು, ಅಂತಹ ಶಾಲೆಗಳ ವಿದ್ಯಾರ್ಥಿಗಳು ಮಂಡಳಿ ನಡೆಸುವ ಪರೀಕ್ಷೆಯಲ್ಲಿ ಹಾಜರಾಗುವುದನ್ನು ತಡೆಯಲು ಪರೀಕ್ಷಾ ಉಪನಿಯಮಗಳಿಗೆ ಬದಲಾವಣೆ ತರುವ ಚಿಂತನೆ ನಡೆಸಿದೆ. ಆಗ ಆ ವಿದ್ಯಾರ್ಥಿಗಳು ಎನ್‌ಐಒಎಸ್ ಪರೀಕ್ಷೆ ಬರೆಯಬೇಕಾಗುತ್ತದೆ.
'ವಿದ್ಯಾರ್ಥಿಗಳು ಶಾಲೆಗೆ ಬರುತ್ತಿಲ್ಲದಿದ್ದರೆ ಅಥವಾ ಮಂಡಳಿ ನಡೆಸುವ ದಿಢೀರ್ ತಪಾಸಣೆ ಸಂದರ್ಭದಲ್ಲಿ ಗೈರಾಗಿದ್ದರೆ, ಅಂತಹ ವಿದ್ಯಾರ್ಥಿಗಳಿಗೆ ಮಂಡಳಿಯ ಪರೀಕ್ಷೆ ಬರೆಯಲು ಅವಕಾಶ ಸಿಗದಿರಬಹುದು' ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿದ್ಯಾರ್ಥಿಗಳು ತರಗತಿ ತಪ್ಪಿಸಿಕೊಳ್ಳುವುದಕ್ಕೆ ನೆರವು ನೀಡುವ ಶಾಲೆಗಳ ವಿರುದ್ಧ ನಿಯಮಗಳ ಅನುಸಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿ ಹೇಳಿದ್ದಾರೆ. ಈ ನಿರ್ಧಾರವನ್ನು 2025-26ನೆಯ ಶೈಕ್ಷಣಿಕ ವರ್ಷದಿಂದ ಜಾರಿಗೆ ತರಲು ಶಿಫಾರಸು ಮಾಡಲಾಗಿದೆ.
ಮಂಡಳಿ ನಡೆಸುವ ಪರೀಕ್ಷೆಗೆ ಹಾಜರಾಗಬೇಕು ಎಂದಾದರೆ ವಿದ್ಯಾರ್ಥಿಗಳು ಶೇ 75ರಷ್ಟು ಹಾಜರಾತಿ ಹೊಂದಿರುವುದು ಕಡ್ಡಾಯ. ಈ ಪ್ರಮಾಣದಲ್ಲಿ ಹಾಜರಾತಿ ಇಲ್ಲದಿದ್ದರೆ, ವಿದ್ಯಾರ್ಥಿಗೆ ಪರೀಕ್ಷೆಗೆ ಹಾಜರಾಗಲು ಅವಕಾಶ ಸಿಗದಿರಬಹುದು ಎಂದು ಅವರು ವಿವರಿಸಿದ್ದಾರೆ. ಸಿಬಿಎಸ್‌ಇ ನಡೆಸುವ ಪರೀಕ್ಷೆ ಬರೆಯಲು ಅವಕಾಶ ಸಿಗದಿದ್ದರೆ ವಿದ್ಯಾರ್ಥಿಗಳು ಎನ್‌ಐಒಎಸ್ ಮೊರೆಹೋಗಬಹುದು.
ಅಗತ್ಯ ಪ್ರಮಾಣದ ಹಾಜರಾತಿ ಇಲ್ಲದ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಹಾಜರಾಗಲು ಸೂಚಿಸುವ ಶಾಲೆಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಬಗ್ಗೆ ಮಂಡಳಿ ಪರಿಶೀಲನೆ ನಡೆಸುತ್ತಿದೆ.
ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ಕೋರ್ಸ್‌ಗಳ ಪ್ರವೇಶ ಪರೀಕ್ಷೆಗೆ ಸಿದ್ಧತೆ ನಡೆಸುವ ಹಲವು ವಿದ್ಯಾರ್ಥಿಗಳು ನಾಮಮಾತ್ರದ ಶಾಲೆಗಳಲ್ಲಿ ಪ್ರವೇಶ ಪಡೆದಿರುತ್ತಾರೆ. ಅವರಿಗೆ ಆಗ ತಮ್ಮ ಪೂರ್ತಿ ಸಮಯವನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವುದಕ್ಕೆ ಮಾತ್ರ ವಿನಿಯೋಗಿಸಲು ಸಾಧ್ಯವಾಗುತ್ತದೆ. ಅವರು ತರಗತಿಗಳಿಗೆ ಹಾಜರಾಗುವುದೇ ಇಲ್ಲ, ನೇರವಾಗಿ ಪರೀಕ್ಷೆ ಬರೆಯುತ್ತಾರೆ.
ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕೋರ್ಸ್‌ಗಳ ಪ್ರವೇಶದಲ್ಲಿ ಇರುವ ರಾಜ್ಯವಾರು ಕೋಟಾಗಳ ಪ್ರಯೋಜನ ಪಡೆಯುವ ಉದ್ದೇಶದಿಂದಲೂ ಕೆಲವು ವಿದ್ಯಾರ್ಥಿಗಳು ನಾಮಮಾತ್ರದ ಶಾಲೆಗಳಲ್ಲಿ ಪ್ರವೇಶ ಪಡೆದುಕೊಳ್ಳುತ್ತಾರೆ.