ನವದೆಹಲಿ: ಹೆದ್ದಾರಿ ಕಾಮಗಾರಿ ವೇಳೆ ಉತ್ತರ ಕನ್ನಡ ಜಿಲ್ಲೆಯ ಹಟ್ಟಿಕೆರೆ ಗ್ರಾಮದಲ್ಲಿ ಅಕ್ರಮವಾಗಿ ಟೋಲ್ ಪ್ಲಾಜಾ ನಿರ್ಮಾಣಕ್ಕೆ ಅನುವು ಮಾಡಿಕೊಟ್ಟ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಕೇಂದ್ರ ಅರಣ್ಯ ಹಾಗೂ ಪರಿಸರ ಸಚಿವಾಲಯ ನಿರ್ದೇಶನ ನೀಡಿ ಮೂರು ವರ್ಷ ಕಳೆದಿದೆ.
ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಕರ್ನಾಟಕ ಅರಣ್ಯ ಇಲಾಖೆ ಹಿಂದೇಟು ಹಾಕಿದೆ.
ಅರಣ್ಯ ಪ್ರದೇಶದಲ್ಲಿ ಒತ್ತುವರಿಗೆ ಕಾರಣರಾದ ಅರಣ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿವರಗಳನ್ನು ಒದಗಿಸುವಂತೆ ಅರಣ್ಯ ಸಚಿವಾಲಯ ನಾಲ್ಕು ಬಾರಿ ಸ್ಪಷ್ಟ ನಿರ್ದೇಶನ ನೀಡಿತ್ತು. ಆದರೂ, ಸಚಿವಾಲಯಕ್ಕೆ ಈವರೆಗೆ ಮಾಹಿತಿ ಒದಗಿಸಿಲ್ಲ. ಕಳೆದ ವರ್ಷ ಇದೇ ಹೆದ್ದಾರಿಯಲ್ಲಿ ಶಿರೂರು ಸಮೀಪ ಭೂಕುಸಿತ ಸಂಭವಿಸಿ ಒಂಬತ್ತು ಜನರು ಮೃತಪಟ್ಟಿದ್ದರು. ಗುತ್ತಿಗೆ ವಹಿಸಿಕೊಂಡ ಐಆರ್‌ಬಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅವೈಜ್ಞಾನಿಕ ಕಾಮಗಾರಿಯೇ ದುರಂತಕ್ಕೆ ಕಾರಣ ಎಂದು ಮುಖ್ಯಮಂತ್ರಿ ಹಾಗೂ ಶಾಸಕರು ದೂಷಿಸಿದ್ದರು.
ಮತ್ತೆ ಪತ್ರ ಬರೆದ ಎಸಿಎಸ್: ಈ ವರ್ಷದ ಜನವರಿ 24ರಂದು ಅರಣ್ಯ ಪಡೆಯ ಮುಖ್ಯಸ್ಥರಿಗೆ ಪತ್ರ ಬರೆದಿದ್ದ ಅರಣ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ(ಎಸಿಎಸ್), 'ಈ ವಿಷಯದಲ್ಲಿ ಕೆನರಾ ವೃತ್ತದ ಹಿರಿಯ ಅಧಿಕಾರಿಗಳು ಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ಒತ್ತುವರಿಗೆ ಕಾರಣರಾದ ಅರಣ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿವರ ಒದಗಿಸುವಂತೆ ಸಚಿವಾಲಯವು ನಾಲ್ಕು ಬಾರಿ ಸ್ಪಷ್ಟ ನಿರ್ದೇಶನ ನೀಡಿದೆ. ಆದರೆ, ತಮ್ಮ ವರದಿಯಲ್ಲಿ ಖಾಸಗಿ ಸಂಸ್ಥೆಯ ಸಿಬ್ಬಂದಿಯ ಮಾಹಿತಿಯನ್ನಷ್ಟೇ ಒದಗಿಸಿರುವುದು ಸಮಂಜಸ ಕ್ರಮ ಅಲ್ಲ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಅರಣ್ಯ ಸಂರಕ್ಷಣಾ ಕಾಯ್ದೆ-1980 ಉಲ್ಲಂಘಿಸಿದ ಎರಡೂ ಇಲಾಖೆಗಳ ಅಧಿಕಾರಿಗಳ ವಿವರಗಳನ್ನು ಒದಗಿಸಬೇಕು' ಎಂದು ತಾಕೀತು ಮಾಡಿದ್ದರು. ಕೆನರಾ ವೃತ್ತದ ಸಿಸಿಎಫ್ ಕೆ.ವಿ.ವಸಂತ ರೆಡ್ಡಿ ಅವರಿಗೆ ಫೆಬ್ರುವರಿ ತಿಂಗಳಲ್ಲಿ ಪತ್ರ ಬರೆದಿದ್ದ ಪಿಸಿಸಿಎಫ್ (ಅರಣ್ಯ ಸಂರಕ್ಷಣೆ), ಅಧಿಕಾರಿಗಳ ವಿವರವನ್ನು ಕೂಡಲೇ ಒದಗಿಸುವಂತೆ ಸೂಚಿಸಿದ್ದರು. ಆದರೆ, ತಪ್ಪೆಸಗಿದ ಅರಣ್ಯ ಅಧಿಕಾರಿಗಳ ಮಾಹಿತಿಯನ್ನು ಕೆನರಾ ವೃತ್ತದ ಅಧಿಕಾರಿಗಳು ನೀಡಿಲ್ಲ.
ಖಾಸಗಿ ಸಂಸ್ಥೆ ಸಿಬ್ಬಂದಿ ಮಾಹಿತಿ ಕೊಟ್ಟಿದ್ದ ಇಲಾಖೆ
ನಿಯಮ ಉಲ್ಲಂಘನೆ ಪ್ರಕರಣದಲ್ಲಿ ರೋಡಿಕ್ ಕನ್ಸಲ್ಟೆಂಟ್ ಕಂಪನಿಯ ಹಿರಿಯ ಎಂಜಿನಿಯರ್ ಹಾಗೂ ಎಕಾಮ್ ಏಷ್ಯಾ ಕಂಪನಿಯ ಇಬ್ಬರು ಎಂಜಿನಿಯರ್ ಲೋಪ ಎಸಗಿದ್ದಾರೆ ಎಂದು ಕೆನರಾ ವೃತ್ತದ ಸಿಸಿಎಫ್ ಅವರು ಸಚಿವಾಲಯಕ್ಕೆ ವರದಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಅರಣ್ಯ ಹಾಗೂ ಹೆದ್ದಾರಿ ಇಲಾಖೆಗಳ ಅಧಿಕಾರಿಗಳು ತಪ್ಪೆಸಗಿದ್ದಾರೆ ಸಚಿವಾಲಯ ಬೊಟ್ಟು ಮಾಡಿ ತೋರಿಸಿತ್ತು. 'ಕಾಯ್ದೆ ಉಲ್ಲಂಘನೆ ಉದ್ದೇಶಪೂರ್ವಕವಾಗಿ ಆಗಿಲ್ಲ, ತಪ್ಪಾಗಿ ಆಗಿದೆ ಎಂದು ಸಿಸಿಎಫ್ ಸಮಜಾಯಿಷಿ ನೀಡಿದ್ದರು.
ಪ್ರಕರಣವೇನು? ಟೋಲ್ ಪ್ಲಾಜಾಗೆ ಅರಣ್ಯ ಭೂಮಿ ಬಳಕೆಗೆ ಒಪ್ಪಿಗೆ ನೀಡುವಂತೆ ಹೆದ್ದಾರಿ ಪ್ರಾಧಿಕಾರವು ಸಚಿವಾಲಯಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಕಾರವಾರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ 2019ರ ಆಗಸ್ಟ್‌ನಲ್ಲಿ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದ್ದರು.
'ಸೀಬರ್ಡ್ ಯೋಜನೆಗಾಗಿ 2,259 ಹೆಕ್ಟೇರ್ ಅರಣ್ಯ ಬಳಕೆಗೆ 1986ರಲ್ಲೇ ಒಪ್ಪಿಗೆ ನೀಡಲಾಗಿತ್ತು. ಹೆದ್ದಾರಿ ವಿಸ್ತರಣೆಗೆ ಹೆದ್ದಾರಿ ಪ್ರಾಧಿಕಾರಕ್ಕೆ 9.13 ಹೆಕ್ಟೇರ್ ಅರಣ್ಯವನ್ನು ರಕ್ಷಣಾ ಇಲಾಖೆಯು 2014ರಲ್ಲಿ ನೀಡಿತ್ತು. ಆದರೆ, ಹೆದ್ದಾರಿ ಪ್ರಾಧಿಕಾರವು 6.68 ಹೆಕ್ಟೇರ್ ಅರಣ್ಯ ಬಳಕೆಗೆ ಮಾತ್ರ ಈ ಹಿಂದೆ ಅನುಮೋದನೆ ಪಡೆದಿತ್ತು. ಇದೀಗ 6 ಎಕರೆ ಅರಣ್ಯ ಬಳಸಲು ಒಪ್ಪಿಗೆ ಕೇಳಿದೆ.
ಇದಕ್ಕಾಗಿ ದಾಖಲೆಗಳನ್ನು ಹಾಗೂ ಸ್ಥಳ ಪರಿಶೀಲನೆ ನಡೆಸಲಾಗಿದೆ. ಇದರಲ್ಲಿ 1.02 ಹೆಕ್ಟೇರ್ ಪ್ರದೇಶವು ಅರಣ್ಯವಾಗಿ ಉಳಿದಿಲ್ಲ. ಹಾಗಾಗಿ, 1.44 ಹೆಕ್ಟೇರ್ ಅರಣ್ಯ ಬಳಕೆಗೆ ಮಾತ್ರ ಒಪ್ಪಿಗೆ ನೀಡಬೇಕಿದೆ. ಹೆದ್ದಾರಿ ವಿಸ್ತರಣೆ ಹಾಗೂ ನಿರ್ವಹಣೆಗೆ ಟೋಲ್ ಪ್ಲಾಜಾ ಅತೀ ಅಗತ್ಯ' ಎಂದು ವರದಿ ಸಲ್ಲಿಸಿದ್ದರು. ಅರಣ್ಯ ಭೂಮಿ ಬಳಕೆಗೆ ಅನುಮೋದನೆ ನೀಡುವ ಸಂದರ್ಭದಲ್ಲಿ ಅರಣ್ಯ ಅಧಿಕಾರಿಗಳು ಲೋಪ ಎಸಗಿರುವುದು ಬೆಳಕಿಗೆ ಬಂದಿತ್ತು.