ಒಟ್ಟಾವಾ: ಕೆನಡಾದ ಮುಂದಿನ ಪ್ರಧಾನಿಯಾಗಿ ಭಾನುವಾರ ಆಯ್ಕೆಯಾದ ಮಾರ್ಕ್ ಕಾರ್ನೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾರಿರುವ 'ವ್ಯಾಪಾರ ಸಮರ'ವನ್ನು ಯಶಸ್ವಿಯಾಗಿ ಗೆಲ್ಲುವ ಪ್ರತಿಜ್ಞೆ ಮಾಡಿದ್ದಾರೆ.
ಲಿಬರಲ್ ಪಾರ್ಟಿಯು 59 ವರ್ಷದ ಕಾರ್ನೆ ಅವರನ್ನು ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಉತ್ತರಾಧಿಕಾರಿಯನ್ನಾಗಿ ಭಾರಿ ಬೆಂಬಲದೊಂದಿಗೆ ಆಯ್ಕೆ ಮಾಡಿದೆ.ಅದರ ಬೆನ್ನಲ್ಲೇ ಅವರು ಟ್ರಂಪ್ ವಿರುದ್ಧ ಹರಿಹಾಯ್ದಿದ್ದಾರೆ.
ಒಟ್ಟಾವದಲ್ಲಿ ತಮ್ಮ ವಿಜಯದ ಭಾಷಣ ಮಾಡಿದ ಅವರು 'ನಾವು ಕಾದಾಟಕ್ಕೆ ಹೋಗುವವರಲ್ಲ. ಆದರೆ, ಯಾರಾದರೂ ಕಾಲು ಕೆರೆದುಕೊಂಡು ನಮ್ಮೊಂದಿಗೆ ಕಾದಾಟಕ್ಕೆ ಇಳಿದರೆ ನಾವು ಕೆನಡಿಯನ್ನರು ಹೋರಾಡಲು ಸದಾ ಸಿದ್ಧರಾಗಿರುತ್ತೇವೆ. ಆದ್ದರಿಂದ ಅಮೆರಿಕನ್ನರು, ಯಾವುದೇ ತಪ್ಪು ಮಾಡಬಾರದು. ಕೆನಡಾವು ಹಾಕಿ ಕ್ರೀಡೆಯಲ್ಲಿ ಗೆಲುವು ಸಾಧಿಸುವಂತೆ ವ್ಯಾಪಾರ ಸಮರದಲ್ಲೂ ಗೆಲ್ಲುತ್ತದೆ' ಎಂದು ಪಕ್ಷದ ಬೆಂಬಲಿಗರನ್ನು ಉದ್ದೇಶಿಸಿ ಹೇಳಿದರು.
'ಟ್ರಂಪ್ ನೇತೃತ್ವದ ಸರ್ಕಾರ ಕೆನಡಾವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಟ್ರಂಪ್ ನಮ್ಮ ದೇಶದ ಕಾರ್ಮಿಕರು, ಕುಟುಂಬಗಳು ಮತ್ತು ವ್ಯವಹಾರಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ಆದರೆ, ನಾವು ಅವರನ್ನು ಯಶಸ್ವಿಯಾಗಲು ಬಿಡುವುದಿಲ್ಲ' ಎಂದು ತಿರುಗೇಟು ನೀಡಿದರು.
ಕಾರ್ನೆಗೆ ಶೇ 85.9 ಮತಗಳು:
ಲಿಬರಲ್ ಪಾರ್ಟಿ ಹೊಸ ನಾಯಕನ ಆಯ್ಕೆಗೆ ಭಾನುವಾರ ನಡೆದ ಚುನಾವಣೆಯಲ್ಲಿ ಕಾರ್ನೆ ಅವರು ತಮ್ಮ ಪ್ರಮುಖ ಪ್ರತಿಸ್ಪರ್ಧಿ, ಮಾಜಿ ಉಪಪ್ರಧಾನಿ ಕ್ರಿಸ್ಟಿಯಾ ಫ್ರೀಲ್ಯಾಂಡ್ ಅವರನ್ನು ಮಣಿಸಿ, ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಉತ್ತರಾಧಿಕಾರಿಯಾಗಿ ಆಯ್ಕೆಯಾದರು. ಸದ್ಯದಲ್ಲೇ ಟ್ರುಡೊ ಅವರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಈ ಹಿಂದೆ ಬ್ಯಾಂಕ್ ಆಫ್ ಕೆನಡಾ ಮತ್ತು ಬ್ಯಾಂಕ್ ಆಫ್ ಇಂಗ್ಲೆಂಡ್ ಎರಡನ್ನೂ ಮುನ್ನಡೆಸಿದ್ದ ಕಾರ್ನೆ ಅವರು ಚಲಾವಣೆಯಾದ ಸುಮಾರು 1,52,000 ಮತಗಳಲ್ಲಿ ಶೇ 85.9 ಮತಗಳನ್ನು ಪಡೆದರು. ಫ್ರೀಲ್ಯಾಂಡ್ ಅವರಿಗೆ ಕೇವಲ ಶೇ 8ರಷ್ಟು ಮತಗಳು ದೊರೆತಿವೆ.
ಟ್ರಂಪ್ ಅವರನ್ನು ಎದುರಿಸುವ ಭರವಸೆಯ ಮೇರೆಗೆ ಕಾರ್ನೆ ಪ್ರಚಾರ ನಡೆಸಿದ್ದರು. ಅಕ್ಟೋಬರ್‌ನಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಅವರು ಪಕ್ಷವನ್ನು ಮುನ್ನಡೆಸುವರು.
'ಭಾರತದ ಜತೆ ಸಂಬಂಧ ಮರುಸ್ಥಾಪನೆಗೆ ಒತ್ತು'
ಭಾರತದೊಂದಿಗೆ ತಮ್ಮ ದೇಶದ ಸಂಬಂಧವನ್ನು ಪುನರ್ ಸ್ಥಾಪಿಸುವುದಾಗಿ ಮಾರ್ಕ್ ಕಾರ್ನೆ ಹೇಳಿದ್ದಾರೆ. ಈಚೆಗೆ ಕ್ಯಾಲ್ಗರಿಯಲ್ಲಿ ಮಾತನಾಡಿದ ಅವರು 'ಭಾರತದೊಂದಿಗೆ ಸಂಬಂಧವನ್ನು ಪುನರ್ ಸ್ಥಾಪಿಸಲು ನಮಗೆ ಸಾಕಷ್ಟು ಅವಕಾಶಗಳಿವೆ. ಆ ವ್ಯಾಪಾರ ಸಂಬಂಧದ ಸುತ್ತಲೂ ಮೌಲ್ಯಗಳ ಹಂಚಿಕೆಯ ಪ್ರಜ್ಞೆಯೂ ಇರಬೇಕು. ಸಂಬಂಧ ಪುನಃ ಸ್ಥಾಪಿಸುವ ಅವಕಾಶವನ್ನು ಎದುರು ನೋಡುತ್ತಿದ್ದೇನೆ' ಎಂದಿದ್ದಾರೆ.
ಖಾಲಿಸ್ತಾನಿ ಪರ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆಂಟರ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಆರೋಪ ಮಾಡಿದ ನಂತರ ಉಭಯ ದೇಶಗಳ ನಡುವಿನ ಸಂಬಂಧ ಹದಗೆಟ್ಟಿದೆ.