ನವದೆಹಲಿ: ಕಾಲೇಜು ಪರೀಕ್ಷೆ ತಪ್ಪಿಸಿಕೊಳ್ಳಲು 17 ವರ್ಷದ ಬಾಲಕನೊಬ್ಬ ಮನೆ ಬಿಟ್ಟು ಓಡಿ ಹೋಗಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.
ದೆಹಲಿಯ ರೋಹಿಣಿ ನಗರದ ಬಾಲಕ ಪರೀಕ್ಷೆ ಬರೆಯಲು ಇಷ್ಟವಿಲ್ಲದೆ, ಮನೆ ಬಿಟ್ಟು ಸುಮಾರು 2,000 ಕಿ.ಮೀಗಳಷ್ಟು ದೂರ ಪ್ರಯಾಣಿಸಿದ್ದು, ಕಟ್ಟಡ ನಿರ್ಮಾಣ ಸ್ಥಳದಲ್ಲಿ ಕೂಲಿ ಕೆಲಸ ಮಾಡಿಕೊಂಡು ಕೊಳೆಗೇರಿಯಲ್ಲಿ ವಾಸಿಸುತ್ತಿದ್ದ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಫೆಬ್ರುವರಿ 21ರಂದು ಬುಧ್ ವಿಹಾರ್ ಪೊಲೀಸ್ ಠಾಣೆಯಲ್ಲಿ ಬಾಲಕ ಕಾಣೆಯಾಗಿರುವ ಬಗ್ಗೆ ದೂರು ನೀಡಲಾಗಿತ್ತು. ಬಾಲಕ ಮನೆ ಬಿಟ್ಟು ಹೋಗಿದ್ದು, ಯಾರೂ ಹುಡುಕುವುದು ಬೇಡ ಎಂದು ತನ್ನ ತಂದೆಗೆ ಸಂದೇಶ ಕಳುಹಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.
ದೂರಿನ ಅನ್ವಯ ಬಾಲಕನ ಹುಡುಕಾಟಕ್ಕಾಗಿ ತಂಡಗಳನ್ನು ರಚಿಸಲಾಯಿತು. ತನಿಖೆಯಲ್ಲಿ ಬಾಲಕ ದೆಹಲಿಯಿಂದ ಬೆಂಗಳೂರಿಗೆ ಬಂದು ಕೆಲಸ ಮಾಡಲು ಪ್ರಾರಂಭಿಸಿದ್ದಾನೆ. ಬಳಿಕ ಅಲ್ಲಿಂದ ಪರಿಚಿತ ವ್ಯಕ್ತಿಯನ್ನು ಸಂಪರ್ಕಿಸಿ ತಮಿಳುನಾಡಿನ ಕೃಷ್ಣಗಿರಿಗೆ ತಲುಪಿರುವುದು ತಿಳಿದುಬಂದಿತು ಎಂದು ಪೊಲೀಸ್ ಉಪ ಆಯುಕ್ತ ವಿಕ್ರಮ್ ಸಿಂಗ್ ಹೇಳಿದ್ದಾರೆ.
ಕೃಷ್ಣಗಿರಿಯ (ಕರ್ನಾಟಕ-ತಮಿಳುನಾಡು ಗಡಿಯ ಸಮೀಪ) ಕಟ್ಟಡ ನಿರ್ಮಾಣ ಸ್ಥಳವೊಂದರಲ್ಲಿ ಕೂಲಿಯಾಗಿ ಬಾಲಕ ಕೆಲಸ ಮಾಡುತ್ತಿದ್ದು, ನಿರ್ಮಾಣ ಸ್ಥಳದ ಕೊಳೆಗೇರಿಯಲ್ಲಿ ವಾಸಿಸುತ್ತಿದ್ದನು. ಸದ್ಯ ಬಾಲಕನನ್ನು ಕರೆತರಲಾಗಿದೆ ಎಂದು ಅವರು ತಿಳಿಸಿದ್ದಾರೆ.