ರಾಣಿಪೇಟ್ : ತಮಿಳುನಾಡಿನಲ್ಲಿ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣವನ್ನು ತಮಿಳು ಭಾಷೆಯಲ್ಲಿ ನೀಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರಿಗೆ ಸವಾಲು ಎಸೆದಿದ್ದಾರೆ.
ಭಾಷೆಯ ವಿಚಾರವಾಗಿ, ಅದರಲ್ಲೂ ಮುಖ್ಯವಾಗಿ ಹಿಂದಿ 'ಹೇರಿಕೆ'ಗೆ ಸ್ಟಾಲಿನ್ ಅವರ ವಿರೋಧದ ವಿಚಾರವಾಗಿ ಅವರ ವಿರುದ್ಧ ವಾಗ್ದಾಳಿ ನಡೆಸಿದ ಶಾ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಹಲವು ಬದಲಾವಣೆಗಳನ್ನು ತಂದಿದೆ ಎಂದರು.
ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್) ಸೇರಲು ಬಯಸುವವರು ಈಗ ತಮ್ಮ ಪ್ರಾದೇಶಿಕ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ ಎಂದರು.
'ಪರೀಕ್ಷೆಯನ್ನು ತಮಿಳಿನಲ್ಲಿಯೂ ಬರೆಯುವುದನ್ನು ಮೋದಿ ನೇತೃತ್ವದ ಸರ್ಕಾರ ಸಾಧ್ಯವಾಗಿಸಿದೆ' ಎಂದು ಶಾ ಅವರು ಕಾರ್ಯಕ್ರಮವೊಂದರಲ್ಲಿ ಹೇಳಿದರು. 'ಇಲ್ಲಿನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣವನ್ನು ತಮಿಳಿನಲ್ಲಿಯೂ ಒದಗಿಸಬೇಕು ಎಂದು ನಾನು ತಮಿಳುನಾಡು ಮುಖ್ಯಮಂತ್ರಿಯವರಲ್ಲಿ ಮನವಿ ಮಾಡುತ್ತಿದ್ದೇನೆ' ಎಂದರು.
ಕೇಂದ್ರ ಸರ್ಕಾರವು ರಾಷ್ಟ್ರೀಯ ಶಿಕ್ಷಣ ನೀತಿ ಮೂಲಕ ಹಿಂದಿ ಹೇರಿಕೆಯಲ್ಲಿ ತೊಡಗಿದೆ ಎಂದು ತಮಿಳುನಾಡಿನ ಆಡಳಿತಾರೂಢ ಪಕ್ಷ ಡಿಎಂಕೆ ಆರೋಪಿಸುತ್ತಿದೆ. ಆದರೆ ಇದನ್ನು ಕೇಂದ್ರ ಅಲ್ಲಗಳೆದಿದೆ. ತಮಿಳುನಾಡಿನಲ್ಲಿ ದ್ವಿಭಾಷಾ ಸೂತ್ರವನ್ನು ಮಾತ್ರವೇ ಪಾಲಿಸಲಾಗುವುದು ಎಂದು ರಾಜ್ಯ ಸರ್ಕಾರ ಹೇಳಿದೆ. ಈ ವಿಚಾರವು ವಿವಾದದ ಸ್ವರೂಪ ಪಡೆದಿರುವ ನಡುವೆ ಶಾ ಹೀಗೆ ಹೇಳಿದ್ದಾರೆ.
ತಮಿಳು ಭಾಷೆ, ತಮಿಳು ಸಂಸ್ಕೃತಿ ಮತ್ತು ಪರಂಪರೆಯು ಭಾರತರ ಪರಂಪರೆಯ ಪಾಲಿಗೆ ಬೆಲೆಕಟ್ಟಲಾಗದ ರತ್ನವಿದ್ದಂತೆ ಎಂದು ಶಾ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.