ನ್ಯೂಯಾರ್ಕ್: ಅಮೆರಿಕದಲ್ಲಿ ನಡೆದ ಮತ್ತೊಂದು ದುರ್ಘಟನೆಯಲ್ಲಿ ಕ್ಯಾಲಿಫೋರ್ನಿಯಾದ ಅತಿದೊಡ್ಡ ಬಿಎಪಿಎಸ್ ಹಿಂದೂ ದೇವಾಲಯಕ್ಕೆ ಅಪರಿಚಿತ ದುಷ್ಕರ್ಮಿಗಳು ಹಾನಿ ಮಾಡಿದ್ದಾರೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.
ಚಿನೋ ಹಿಲ್ಸ್‌ನಲ್ಲಿರುವ ಶ್ರೀ ಸ್ವಾಮಿನಾರಾಯಣ ಮಂದಿರ ಅಪವಿತ್ರಗೊಂಡಿದೆ ಎಂದು ಬೋಚಸನ್‌ವಾಸಿ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆ (ಬಿಎಪಿಎಸ್) ಶನಿವಾರ ಹೇಳಿದೆ.
'ಈ ಬಾರಿ ಕ್ಯಾಲಿಫೋರ್ನಿಯಾದ ಚಿನೋ ಹಿಲ್ಸ್‌ನಲ್ಲಿ ಮತ್ತೊಂದು ಮಂದಿರ ಹಾನಿಗೊಳಗಾಗಿದ್ದು, ಹಿಂದೂ ಸಮುದಾಯವು ದ್ವೇಷದ ವಿರುದ್ಧ ದೃಢವಾಗಿ ನಿಂತಿದೆ. ಚಿನೋ ಹಿಲ್ಸ್ ಮತ್ತು ದಕ್ಷಿಣ ಕ್ಯಾಲಿಫೋರ್ನಿಯಾದ ಸಮುದಾಯದೊಂದಿಗೆ ಎಂದಿಗೂ ದ್ವೇಷ ಬೇರೂರಲು ನಾವು ಬಿಡುವುದಿಲ್ಲ' ಎಂದು ಬಿಎಪಿಎಸ್ ಸಾರ್ವಜನಿಕ ವ್ಯವಹಾರಗಳ ವಿಭಾಗ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
'ನಮ್ಮ ಸಾಮಾನ್ಯ ಮಾನವೀಯತೆ ಮತ್ತು ನಂಬಿಕೆಯು ಶಾಂತಿ ಹಾಗೂ ಸಹಾನುಭೂತಿ ಮೇಲುಗೈ ಸಾಧಿಸುವುದನ್ನು ಖಚಿತಪಡಿಸುತ್ತದೆ'ಎಂದು ಅದು ಹೇಳಿದೆ.
ಉತ್ತರ ಅಮೆರಿಕದ ಹಿಂದೂಗಳ ಒಕ್ಕೂಟವು(ಸಿಒಎಚ್‌ಎನ್‌ಎ) ಹಿಂದೆ ನಡೆದ ಇಂತಹ ಪ್ರಕರಣಗಳತ್ತ ಗಮನ ಸೆಳೆದಿದ್ದು, ಸಂಪೂರ್ಣ ತನಿಖೆಗೆ ಒತ್ತಾಯಿಸಿದೆ.
ಮತ್ತೊಂದು ಹಿಂದೂ ದೇವಾಲಯವನ್ನು ಧ್ವಂಸ ಮಾಡಲಾಗಿದೆ. ಈ ಬಾರಿ ಕ್ಯಾಲಿಫೋರ್ನಿಯಾದ ಚಿನೋ ಹಿಲ್ಸ್‌ನಲ್ಲಿರುವ ಐಕಾನಿಕ್ ಬಿಎಪಿಎಸ್ ದೇವಾಲಯ ಧ್ವಂಸವಾಗಿದೆ. ಹಿಂದೂಗಳ ಬಗ್ಗೆ ಅಮೆರಿಕದಲ್ಲಿ ದ್ವೇಷವಿಲ್ಲ. ಅದು ಕಪೋಲಕಲ್ಪಿತ ಎಂದು ಹೇಳುವ ಮಾಧ್ಯಮಗಳು ಮತ್ತು ಶಿಕ್ಷಣ ತಜ್ಞರು ಏನು ಹೇಳುತ್ತಾರೆ ಎಂದು ಅದು ಪ್ರಶ್ನಿಸಿದೆ.
ಕಳೆದ ಕೆಲವು ವರ್ಷಗಳಲ್ಲಿ ಧ್ವಂಸಗೊಂಡ ಅಥವಾ ಕಳ್ಳತನವಾದ 10 ದೇವಾಲಯಗಳ ಪಟ್ಟಿಯನ್ನು ಅದು ಬಿಡುಗಡೆ ಮಾಡಿದೆ.
ಸೆಪ್ಟೆಂಬರ್‌ನಲ್ಲಿ, ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೊದಲ್ಲಿರುವ ಬಿಎಪಿಎಸ್ ಹಿಂದೂ ದೇವಾಲಯದ ನೇಲೆ ಹಿಂದೂಗಳೇ ಹಿಂದಿರುಗಿ! ಎಂದು ಬರೆಯಲಾಗಿತ್ತು.
ಸ್ಯಾಕ್ರಮೆಂಟೊ ಘಟನೆಗೆ ಸುಮಾರು 10 ದಿನಗಳ ಮೊದಲು, ನ್ಯೂಯಾರ್ಕ್‌ನ ಮೆಲ್ವಿಲ್ಲೆಯಲ್ಲಿರುವ ಮತ್ತೊಂದು ಬಿಎಪಿಎಸ್ ಶ್ರೀ ಸ್ವಾಮಿನಾರಾಯಣ ಮಂದಿರವನ್ನು ದ್ವೇಷಪೂರಿತ ಸಂದೇಶಗಳಿಂದ ವಿರೂಪಗೊಳಿಸಲಾಗಿತ್ತು.
ನ್ಯೂಯಾರ್ಕ್‌ನಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ಈ ಘಟನೆಯನ್ನು ಬಲವಾಗಿ ಖಂಡಿಸಿತ್ತು.