ಮಧೂರು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ ಕುರಿತ ಮೊತ್ತಮೊದಲ ಚಿತ್ರ ಸಂಪುಟ "ನಮೋಗಣಪ" ವು ನಾಳೆ(ಮಾ.27) ಮಧೂರಿನಲ್ಲಿ ಬ್ರಹ್ಮಕಲಶೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಬಿಡುಗಡೆಯಾಗಲಿದೆ. ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಪುತ್ತೂರಿನ ಕೈಂತಜೆ ಪ್ರಕಾಶನವು ಹೊರ ತಂದಿರುವ 324 ಪುಟಗಳ ಈ ಚಿತ್ರಸಂಪುಟಗಳು ಕಪ್ಪು ಬಿಳುಪು ಕಾವ್ಯಾತ್ಮಕ ಚಿತ್ರಗಳ ಮೂಲಕ ಮಧೂರಿನ ದಿನಚರಿಯನ್ನು ಭಕ್ತರ ಎದುರು ತೆರೆದಿಡುತ್ತದೆ.
ಪತ್ರಕರ್ತ ರಮೇಶ್ ಕೈಂತಜೆ ಅವರು ಇದರಲ್ಲಿರುವ ಚಿತ್ರಗಳನ್ನು ತೆಗೆದಿದ್ದು ಕವಿ ಸಾಹಿತಿ ಡಾ. ವಸಂತಕುಮಾರ ಪೆರ್ಲ ಅವರು ಮಧೂರು ದೇಗುಲದ ಬಗ್ಗೆ ತಲಸ್ಪರ್ಶಿ ಅಧ್ಯಯನ ಲೇಖನವನ್ನು ಬರೆದಿದ್ದಾರೆ. ಬ್ರಹ್ಮಕಲಶ, ಮೂಡಪ್ಪ ಸೇವೆಯ ವಿಶೇಷ ಸಂದರ್ಭದಲ್ಲಿ ಈ ಚಿತ್ರಸಂಪುಟಗಳು ಕಲಾತ್ಮಕವಾಗಿ ಹೊರಬರುತ್ತಿವೆ. ಮಧೂರು ದೇವಾಲಯದ ಬಗ್ಗೆ ಇದೇ ಮೊದಲ ಬಾರಿಗೆ ಪ್ರಕಟವಾಗುತ್ತಿರುವ ಈ ಚಿತ್ರಸಂಪುಟ 'ನಮೋ ಗಣಪ'ವು ತನ್ನ ಸೊಗಸಾದ, ಅರ್ಥಗರ್ಭಿತವಾದ ಚಿತ್ರಮಾಲಿಕೆ ಹಾಗೂ ವಿಷಯ ಸಂಗ್ರಹದ ಮೂಲಕ ಸಾವಿರಾರು ಪುಟಗಳಷ್ಟು ವಿಷಯವನ್ನು ಓದುಗರೆದುರು ತೆರೆದಿಡುತ್ತದೆ. ಚಿತ್ರ ಸಂಪುಟಗಳಿಗಾಗಿ ಸಂಪರ್ಕ ಸಂಖ್ಯೆ ವಾಟ್ಸಪ್ 9448858173. ಈ ಕುರಿತು ಮಧೂರು ಬ್ರಹ್ಮಕಲಶೋತ್ಸವ ಸಮಿತಿಯ ವತಿಯಿಂದ ಈ ಪತ್ರಿಕಾ ಹೇಳಿಕೆಯನ್ನು ಬಿಡುಗಡೆಮಾಡಲಾಗಿದೆ.