ಬೀಜಿಂಗ್: 'ಭಾರತ ಮತ್ತು ಚೀನಾ ನಡುವಿನ ದ್ವಿಪಕ್ಷೀಯ ಸಂಬಂಧಗಳ ವಿಚಾರದಲ್ಲಿ ಸಕಾರಾತ್ಮಕ ಪ್ರಗತಿ ಸಾಧಿಸಲಾಗಿದೆ' ಎಂದು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಶುಕ್ರವಾರ ಹೇಳಿದ್ದಾರೆ.
ವಾರ್ಷಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,'ರಷ್ಯಾದ ಕಜನ್‌ನಲ್ಲಿ ನಡೆದ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರ ನಡುವಿನ ಮಾತುಕತೆ ಫಲವಾಗಿ ಉಭಯ ದೇಶಗಳ ನಡುವಿನ ಸಂಬಂಧವು ಸಕಾರಾತ್ಮಕ ಪ್ರಗತಿ ಕಂಡಿದೆ' ಎಂದು ಹೇಳಿದರು.
'ಪೂರ್ವ ಲಡಾಖ್ ಗಡಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಉದ್ಭವಿಸಿದ್ದ ಸಂಘರ್ಷಕ್ಕೆ ಕಳೆದ ವರ್ಷ ಅಂತ್ಯ ಹಾಡಲಾಗಿದೆ. ಇದರ ಫಲವಾಗಿ, ಎಲ್ಲ ಹಂತಗಳಲ್ಲಿ ಉತ್ತೇಜನಕಾರಿ ಪರಿಣಾಮಗಳು ಕಂಡುಬಂದಿವೆ' ಎಂದರು.
'ಗಡಿಗೆ ಸಂಬಂಧಿಸಿದ ಪ್ರಶ್ನೆಗಳಾಗಲಿ ಅಥವಾ ನಿರ್ದಿಷ್ಟ ವಿಚಾರ ಕುರಿತ ಭಿನ್ನಾಭಿಪ್ರಾಯಗಳು ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧದ ಮೇಲೆ ಅಡ್ಡಪರಿಣಾಮ ಬೀರುವುದಿಲ್ಲ' ಎಂದೂ ಹೇಳಿದರು.
ಪೂರ್ವ ಲಡಾಖ್ ಗಡಿಯ ಡೆಪ್ಸಾಂಗ್ ಮತ್ತು ಡೆಮ್‌ಚೊಕ್ ಸ್ಥಳಗಳಲ್ಲಿ ಉಭಯ ದೇಶಗಳ ಸೈನಿಕರ ನಡುವಿನ ಸಂಘರ್ಷ ಶಮನ ಮಾಡುವುದು ಬಾಕಿ ಉಳಿದಿತ್ತು. ಹಲವು ಸುತ್ತು ಮಾತುಕತೆ ಬಳಿಕ, ಈ ಸ್ಥಳಗಳಲ್ಲಿ ನಿಯೋಜನೆ ಮಾಡಲಾಗಿದ್ದ ಯೋಧರನ್ನು ಎರಡೂ ದೇಶಗಳು ಕಳೆದ ವರ್ಷ ಸಂಪೂರ್ಣ ವಾಪಸ್ ಕರೆಸಿಕೊಂಡಿವೆ.
-ವಾಂಗ್ ಯಿ, ಚೀನಾ ವಿದೇಶಾಂಗ ಸಚಿವವಿಶ್ವದ ಎರಡು ಅತ್ಯಂತ ಪ್ರಾಚೀನ ನಾಗರಿಕತೆಗಳಾದ ಚೀನಾ ಮತ್ತು ಭಾರತ ತಮ್ಮ ಗಡಿಗಳಲ್ಲಿ ಶಾಂತಿ ಮತ್ತು ಸ್ಥಿರತೆ ಸ್ಥಾಪಿಸುವ ಸಾಮರ್ಥ್ಯ ಮತ್ತು ವಿವೇಚನೆ ಹೊಂದಿವೆ.