ತಿರುವನಂತಪುರ: ಹೊಸ ಶಿಕ್ಷಣ ನೀತಿಯಲ್ಲಿ (ಎನ್‌ಇಪಿ) ತ್ರಿಭಾಷಾ ಸೂತ್ರವು ಇಡೀ ದೇಶಕ್ಕೆ ಒಳ್ಳೆಯದು ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.
ಎನ್‌ಇಪಿಯಲ್ಲಿ ತ್ರಿಭಾಷಾ ಸೂತ್ರದ ಕುರಿತು ನಡೆಯುತ್ತಿರುವ ಗಂಭೀರ ಚರ್ಚೆಯ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, 'ಕೆಲವು ಜನರು ಉದ್ದೇಶಪೂರ್ವಕವಾಗಿ ಈ ವಿಷಯದಲ್ಲಿ ರಾಜಕೀಯ ಮಾಡಲು ಪ್ರಯತ್ನಿಸುತ್ತಿದ್ದಾರೆ.
ಎನ್‌ಇಪಿಯಲ್ಲಿನ ತ್ರಿಭಾಷಾ ಸೂತ್ರ ಇಡೀ ದೇಶಕ್ಕೆ ಒಳ್ಳೆಯದು' ಎಂದು ತಿಳಿಸಿದ್ದಾರೆ.
'ಇಂದು ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗಿದ್ದಾರೆ. ಆದರೆ, ಹಿಂದಿ ಅವರ ಮಾತೃಭಾಷೆಯಲ್ಲ. ಅವರ ಮಾತೃಭಾಷೆ ಗುಜರಾತಿ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮಾತೃಭಾಷೆ ಗುಜರಾತಿ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಮಾತೃಭಾಷೆ ಒಡಿಯಾ. ನನ್ನ ಮಾತೃಭಾಷೆ ಅರುಣಾಚಲಿ. ಆದರೆ, ನಾವು ನಮ್ಮ ದೇಶದ ಹಿತಾಸಕ್ತಿಯನ್ನು ಮುಖ್ಯವಾಗಿಟ್ಟುಕೊಂಡು ಒಂದು ತಂಡವಾಗಿ ಕೆಲಸ ಮಾಡುತ್ತಿದ್ದೇವೆ' ಎಂದು ರಿಜಿಜು ಹೇಳಿದ್ದಾರೆ.
'ಜಾತಿ, ಮತ, ಸಮುದಾಯ, ಧರ್ಮ ಅಥವಾ ಭಾಷೆಯ ಆಧಾರದ ಮೇಲೆ ದೇಶವನ್ನು ವಿಭಜಿಸಬಾರದು. ನಾವೆಲ್ಲರೂ ಭಾರತೀಯರು, ನಾವು ಒಟ್ಟಾಗಿ ಕೆಲಸ ಮಾಡೋಣ. ದೇಶದಲ್ಲಿನ ಪ್ರತಿಯೊಂದು ಪ್ರದೇಶ, ಸಮುದಾಯ ಮತ್ತು ಎಲ್ಲರೂ ಸಮಾನರು ಎಂದು ಪ್ರಧಾನಿ ಮೋದಿ ಅವರು ನಿರಂತರವಾಗಿ ಹೇಳುತ್ತಿದ್ದಾರೆ' ಎಂದು ಅವರು ತಿಳಿಸಿದ್ದಾರೆ.