ತಿರುವನಂತಪುರಂ: ಕೇರಳ ವಿಶ್ವವಿದ್ಯಾಲಯವೊಂದರ ಬೋಧಕರ ಬಳಿಯಿದ್ದ 71 ಎಂಬಿಎ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳು ನಾಪತ್ತೆಯಾಗಿವೆ. ಇದು ರಾಜಕೀಯ ತಿರುವು ಪಡೆದಿದ್ದು, ಮರು ಪರೀಕ್ಷೆ ನಡೆಸುವ ತೀರ್ಮಾನಕ್ಕೆ ವಿರೋಧ ಪಕ್ಷ ಯುನೈಟೆಡ್ ಡೆಮಾಕ್ರಟಿಕ್ ಫೆಡರೇಷನ್ (ಯುಡಿಎಫ್) ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಈ ಪ್ರಕರಣ ರಾಜ್ಯ ಸರ್ಕಾರದ ದುರಾಡಳಿತ ಮತ್ತು ಉನ್ನತ ಶಿಕ್ಷಣದಲ್ಲಿ ಮಿತಿಮೀರಿದ ರಾಜಕೀಯಕ್ಕೆ ಉದಾಹರಣೆ ಎಂದು ಯುಡಿಎಫ್ ನಾಯಕ ಸತೀಶನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
2022-24ನೇ ಬ್ಯಾಚ್‌ನ 'ಪ್ರಾಜೆಕ್ಟ್ ಫೈನಾನ್ಸ್' ವಿಷಯದ ಮೂರನೇ ಸೆಮಿಸ್ಟರ್ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನಕ್ಕಾಗಿ ಪಾಲಕ್ಕಾಡ್ ಮೂಲದ ಬೋಧಕ ಪ್ರಮೋದ್ ಎಂಬುವವರಿಗೆ ನೀಡಲಾಗಿತ್ತು. ಬೈಕ್‌ನಲ್ಲಿ ತೆರಳುತ್ತಿದ್ದಾಗ ಉತ್ತರ ಪತ್ರಿಕೆಗಳು ಕಳೆದುಹೋಗಿವೆ ಎಂದು ವಿಶ್ವವಿದ್ಯಾಲಯಕ್ಕೆ ಅವರು ಮಾಹಿತಿ ನೀಡಿದ್ದರು.
ಕೋರ್ಸ್ ಮುಗಿದರೂ ಫಲಿತಾಂಶ ಘೋಷಿಸದೇ ಪ್ರಕರಣ ಮುಚ್ಚಿಹಾಕುವ ಯತ್ನ ನಡೆದಿದೆ. ಪರೀಕ್ಷೆ ನಡೆದ 10 ತಿಂಗಳ ನಂತರ ಮರು ಪರೀಕ್ಷೆ ತಗೆದುಕೊಳ್ಳಲು ವಿದ್ಯಾರ್ಥಿಗಳಿಗೆ ವಿವಿ ಸೂಚಿಸುತ್ತಿದೆ. ವಿವಿ ಮಾಡಿದ ತಪ್ಪಿಗೆ ವಿದ್ಯಾರ್ಥಿಗಳು ಶಿಕ್ಷೆ ಅನುಭವಿಸಬೇಕೆ ಎಂದು ಸತೀಶನ್ ಪ್ರಶ್ನಿಸಿದ್ದಾರೆ.
ಉನ್ನತ ಶಿಕ್ಷಣ ಸಚಿವೆ ಆರ್.ಬಿಂದು ಪ್ರತಿಕ್ರಿಯಿಸಿ, 'ಇದು ಬೋಧಕರೊಬ್ಬರ ನಿರ್ಲಕ್ಷ್ಯ. ಉದ್ದೇಶಪೂರ್ವಕವಾಗಿಯೇ ಉತ್ತರ ಪತ್ರಿಕೆ ನಾಪತ್ತೆ ಮಾಡಿರಬಹುದು. ಸರ್ಕಾರ ಗಂಭೀರವಾಗಿ ಪರಿಗಣಿಸಿ ಕಾನೂನು ಕ್ರಮ ಜರುಗಿಸಲಿದೆ' ಎಂದರು.
ಮನೆಯಲ್ಲಿ ಉತ್ತರ ಪತ್ರಿಕೆ ಮೌಲ್ಯಮಾಪನಕ್ಕೆ ಅವಕಾಶ ನೀಡಿದ್ದೇ ವಿವಿಯ ಲೋಪ. ಕಾನೂನು ರೀತಿ ಇದನ್ನು ಎದುರಿಸಲು ಸಿದ್ಧ ಪ್ರಮೋದ್ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.