ತಿರುವನಂತಪುರಂ: ಎರಡೆರಡು ಮತದಾರರ ಗುರುತಿನ ಚೀಟಿ ಸಂಖ್ಯೆಗಳನ್ನು ಹೊಂದಿರುವ ಮತದಾರರಿಗೆ ಮುಂದಿನ ಮೂರು ತಿಂಗಳೊಳಗೆ ವಿಶಿಷ್ಟ ಮತದಾರರ ಗುರುತಿನ ಚೀಟಿ ಸಂಖ್ಯೆಗಳನ್ನು ನೀಡಲಾಗುವುದು ಎಂದು ಆಯೋಗ ಸ್ಪಷ್ಟಪಡಿಸಿದೆ.
ಭವಿಷ್ಯದಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರಿಸುವವರಿಗೂ ಈ ವಿಶಿಷ್ಟ ಸಂಖ್ಯೆಯನ್ನು ಖಚಿತಪಡಿಸಿಕೊಳ್ಳಲಾಗುವುದು. ನಕಲಿ ಮತದಾರರ ಗುರುತಿನ ಚೀಟಿ ಸಂಖ್ಯೆಗಳನ್ನು ಪಡೆದವರು ನಿಜವಾದ ಮತದಾರರು ಎಂದು ಆಯೋಗದ ತನಿಖೆಯಲ್ಲಿ ಕಂಡುಬಂದಿದೆ. ಮತದಾರರ ಗುರುತಿನ ಚೀಟಿ ಸರಣಿಯನ್ನು ಹಂಚಿಕೆ ಮಾಡುವಾಗ ಕೆಲವು ನೋಂದಣಿ ಅಧಿಕಾರಿಗಳು ತಪ್ಪು ಸರಣಿಯನ್ನು ನಮೂದಿಸಿದ್ದರಿಂದ ಈ ದೋಷ ಸಂಭವಿಸಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮದೇ ಆದ ಮತದಾರರ ಪಟ್ಟಿಗಳನ್ನು ಸ್ವತಂತ್ರವಾಗಿ ನಿರ್ವಹಿಸುತ್ತಿದ್ದ ಕಾರಣ ದೋಷವು ಇಲ್ಲಿಯವರೆಗೆ ಪತ್ತೆಯಾಗಿರಲಿಲ್ಲ. ತಾಂತ್ರಿಕ ತಜ್ಞರೊಂದಿಗೆ ಚರ್ಚಿಸಿದ ನಂತರ ಇದಕ್ಕೆ ಪರಿಹಾರ ಕಂಡುಕೊಂಡಿರುವುದಾಗಿ ಆಯೋಗ ತಿಳಿಸಿದೆ. ಮತದಾರರ ಗುರುತಿನ ಚೀಟಿ ಸಂಖ್ಯೆ ಏನೇ ಇರಲಿ, ಮತಗಟ್ಟೆಯಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರಿರುವ ಮತದಾರರು ಅಲ್ಲಿ ಮಾತ್ರ ಮತ ಚಲಾಯಿಸಬಹುದು ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ಚುನಾವಣಾ ಆಯೋಗದ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾದ ಅಂತಿಮ ಮತದಾರರ ಪಟ್ಟಿಯಲ್ಲಿ ದೋಷವಿದೆ ಎಂದು ದೂರು ಇದ್ದರೆ, ಜಿಲ್ಲಾ ಮ್ಯಾಜಿಸ್ಟ್ರೇಟ್, ಜಿಲ್ಲಾಧಿಕಾರಿ ಅಥವಾ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್‍ಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ನಿರ್ಧಾರವು ತೃಪ್ತಿಕರವಾಗಿಲ್ಲದಿದ್ದರೆ, ಆಯಾ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದ ಮುಖ್ಯ ಚುನಾವಣಾ ಅಧಿಕಾರಿಗೆ ದೂರು ಸಲ್ಲಿಸಬಹುದು ಎಂದು ಚುನಾವಣಾ ಆಯೋಗ ತಿಳಿಸಿದೆ.