HEALTH TIPS

ವಿಚಾರಣಾಧೀನ ಕೈದಿಗಳಿಗೆ ಪ್ರತ್ಯೇಕ ಬಂಧನ ಕೇಂದ್ರ; ಇವು ಜೈಲುಗಳಲ್ಲ: ಸಂಸದೀಯ ಸಮಿತಿ

ನವದೆಹಲಿ: ಕಠಿಣ ಶಿಕ್ಷೆಗೆ ಒಳಗಾಗಿರುವ ಅಪರಾಧಿಗಳೊಂದಿಗೆ ವಿಚಾರಣಾಧೀನ ಕೈದಿಗಳಿಗೆ ಸೆರೆವಾಸ ವಿಧಿಸಬಾರದು. ಅಲ್ಲದೆ, ವಿಚಾರಣಾಧೀನ ಕೈದಿಗಳನ್ನು ಪ್ರತ್ಯೇಕವಾದ 'ಬಂಧನ ಕೇಂದ್ರ'ಗಳಲ್ಲಿರಿಸಬೇಕು ಹಾಗೂ ಈ 'ಕೇಂದ್ರ'ಗಳನ್ನು ಜೈಲು ಎಂಬುದಾಗಿ ಕರೆಯಬಾರದು.

- ಇದು, ಗೃಹ ಸಚಿವಾಲಯ ಕುರಿತ ಸಂಸದೀಯ ಸ್ಥಾಯಿ ಸಮಿತಿಯು ಕೇಂದ್ರ ಗೃಹ ಸಚಿವಾಲಯಕ್ಕೆ ಸಲ್ಲಿಸಿರುವ 'ಅನುದಾನಗಳ ಬೇಡಿಕೆ' (2025-26) ಕುರಿತ ವರದಿಯಲ್ಲಿನ ಶಿಫಾರಸು.

ಬಿಜೆಪಿ ಸಂಸದ ರಾಧಾಮೋಹನ್ ದಾಸ ಅಗ್ರವಾಲ್ ನೇತೃತ್ವದ ಸ್ಥಾಯಿ ಸಮಿತಿಯು ಹಲವು ಶಿಫಾರಸುಗಳನ್ನು ಒಳಗೊಂಡ ವರದಿಯನ್ನು ಸಚಿವಾಲಯಕ್ಕೆ ಇದೇ ವಾರ ಸಲ್ಲಿಸಿದೆ.

'ಘೋರ ಅಪರಾಧಗಳನ್ನು ಎಸಗಿ, ಶಿಕ್ಷೆ ಅನುಭವಿಸುತ್ತಿರುವವರನ್ನು ಇರಿಸಿರುವ ಜೈಲಿನಲ್ಲಿಯೇ ವಿಚಾರಣಾಧೀನ ಕೈದಿಗಳನ್ನು ಇರಿಸುವುದು ಸೂಕ್ತವಲ್ಲ. ವಿಚಾರಣಾಧೀನ ಕೈದಿಗಳು ಕೂಡ ಅವರ ಪ್ರಭಾವಕ್ಕೆ ಒಳಗಾಗಿ ಘೋರ ಅಪರಾಧಿಗಳಾಗುವುದನ್ನು ತಡೆಯುವುದು ಅಗತ್ಯ' ಎಂಬುದು ಸೇರಿದಂತೆ ಹಲವು ಶಿಫಾರಸುಗಳು ವರದಿಯಲ್ಲಿವೆ.

'2016ರ ಮಾದರಿ ಬಂದೀಖಾನೆ ಕೈಪಿಡಿ' ಹಾಗೂ 'ಮಾದರಿ ಬಂದೀಖಾನೆಗಳು ಹಾಗೂ ಪರಿಹಾರಾತ್ಮಕ ಸೇವೆಗಳ ಕಾಯ್ದೆ' ಪ್ರಕಾರ, ವಿಚಾರಣಾಧೀನ ಕೈದಿಗಳು ಹಾಗೂ ಶಿಕ್ಷೆಗೆ ಗುರಿಯಾದ ಅಪರಾಧಿಗಳನ್ನು ಪ್ರತ್ಯೇಕವಾಗಿಯೇ ಇರಿಸಲಾಗುತ್ತದೆ ಎಂದು ಗೃಹ ಸಚಿವಾಲಯವು ಸಮಿತಿಗೆ ತಿಳಿಸಿದೆ.

'ಸಂವಿಧಾನದ ಪ್ರಕಾರ, ಬಂದೀಖಾನೆಯು ರಾಜ್ಯಗಳ ವಿಷಯ. ಹೀಗಾಗಿ, ಸಮಿತಿ ನೀಡಿರುವ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರುವ ಜವಾಬ್ದಾರಿ ರಾಜ್ಯ ಸರ್ಕಾರಗಳದ್ದಾಗಿದೆ' ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

ವರದಿಯಲ್ಲಿ ಪ್ರಮುಖ ಅಂಶಗಳು...

* ದೇಶದಲ್ಲಿ ಜೈಲುಗಳಲ್ಲಿರುವ ಕೈದಿಗಳ ಪೈಕಿ ವಿಚಾರಣಾಧೀನ ಕೈದಿಗಳ ಸಂಖ್ಯೆ ಶೇ 75ರಷ್ಟಿದೆ. ಅವರ ವಿರುದ್ಧ ಪ್ರಕರಣಗಳು ಬಹುದಿನಗಳಿಂದಲೂ ಬಾಕಿ ಉಳಿದಿವೆ ಎಂಬುದನ್ನು ಈ ಅಂಶವು ತೋರಿಸುತ್ತದೆ.

* ಅನೇಕ ಪ್ರಕರಣಗಳಲ್ಲಿ ಸುದೀರ್ಘ ಕಾಲ ಸೆರೆವಾಸ ಅನುಭವಿಸಿದ ನಂತರ ವಿಚಾರಣಾಧೀನ ಕೈದಿಗಳು ಖುಲಾಸೆಗೊಂಡಿರುವ ನಿದರ್ಶನಗಳಿವೆ

* ಕಠಿಣ ಶಿಕ್ಷೆಗೆ ಗುರಿಯಾಗಿ ಸೆರೆವಾಸ ಅನುಭವಿಸುತ್ತಿರುವ ಅಪರಾಧಿಗಳಿಗೂ ಹಾಗೂ ಜೈಲುಗಳಲ್ಲಿ ಇರುವ ವಿಚಾರಣಾಧೀನ ಕೈದಿಗಳಿಗೂ ಸಂಬಂಧಿಸಿದ ನಿಯಮಗಳಲ್ಲಿ ಅಂತಹ ವ್ಯತ್ಯಾಸ ಇಲ್ಲ

* ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಗಳು ಹಾಗೂ ವಿಚಾರಣಾಧೀನ ಕೈದಿಗಳು ಜೈಲುಗಳಲ್ಲಿ ಒಟ್ಟಿಗೆ ಇರುವುದು ಸರಿಯಲ್ಲ. ಸಣ್ಣಪುಟ್ಟ ಅಪರಾಧ ಎಸಗಿರುವ ವಿಚಾರಣಾಧೀನ ಕೈದಿಗಳು ನಂತರ ಘೋರ ಕೃತ್ಯಗಳನ್ನು ಎಸಗುವುದಕ್ಕೆ ತರಬೇತಿ ನೀಡಿ ಪೋಷಿಸುವ ಕೇಂದ್ರಗಳಾಗಿ ಜೈಲುಗಳು ಪರಿವರ್ತನೆಗೊಳ್ಳುತ್ತಿವೆ

* ವಿಚಾರಣಾಧೀನ ಕೈದಿಗಳು ಖುಲಾಸೆಗೊಂಡ ನಂತರವೂ 'ಜೈಲಿನಲ್ಲಿ ಇದ್ದು ಬಂದವ' ಎಂಬ ಕಳಂಕ ಹೊರಬೇಕಾಗುತ್ತದೆ. ಇದನ್ನು ತಪ್ಪಿಸಲು ವಿಚಾರಣಾಧೀನ ಕೈದಿಗಳಿಗಾಗಿ ಪ್ರತ್ಯೇಕ 'ಬಂಧನ ಕೇಂದ್ರ'ಗಳನ್ನು ಸ್ಥಾಪಿಸಬೇಕು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries