ಕಾಸರಗೋಡು: ನಮ್ಮ ಪರಿಸರವನ್ನು ತ್ಯಾಜ್ಯಮುಕ್ತಗೊಳಿಸಲು ಸಂಘಟಿತ ಹಾಗೂ ನಿರಂತರ ಕಾರ್ಯಚಟುವಟಿಕೆ ನಡೆಸುವುದು ಅನಿವಾರ್ಯ ಎಂಬುದಾಘಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ತಿಳಿಸಿದ್ದಾರೆ.
ಅವರು ಕಾಸರಗೋಡು ಪ್ರೆಸ್ ಕ್ಲಬ್ ಲೈಬ್ರರಿ ಸಭಾಂಗಣದಲ್ಲಿ ಜಿಲ್ಲಾ ಶುಚಿತ್ವ ಮಿಷನ್ ವತಿಯಿಂದ ಪತ್ರಕರ್ತರಿಗಾಗಿ ಆಯೋಜಿಸಿದ್ದ ಶುಚಿತ್ವ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಪರಿಸರ ಶುಚೀಕರಣ ಒಂದು ದಿನದಲ್ಲಿ ಮಾಡಿಮುಗಿಸಲು ಸಾಧ್ಯವಿಲ್ಲ. ಎಲ್ಲ ಜನರ ಸಹಭಾಗಿತ್ವದೊಂದಿಗೆ ನಿರಂತರ ಪ್ರಕ್ರಿಯೆ ಇದಾಗಬೇಕು. ಇದಕ್ಕಾಗಿ ಪ್ರತಿಯೊಬ್ಬನಲ್ಲಿ ತ್ಯಾಜ್ಯ ನಿರ್ವಹಣೆಯ ಅರಿವು ಬೆಳೆಯಬೇಕು. ನಿತ್ಯ ಕಸ ಸುರಿಯುವ ಪ್ರದೇಶಗಳಿದ್ದರೆ ಅಂತಹ ಜಾಗದಲ್ಲಿ ಹೂದೋಟ ಸೇರಿದಂತೆ ನಿತ್ಯ ಜನಸಂಚಾರದ ಪ್ರದೇಶವಾಗಿ ಮಾರ್ಪಡಿಸಬೇಕು. ಇದಕ್ಕಾಗಿ ಸಥಳೀಯ ಸಂಘ ಸಂಸ್ಥೆಗಳ ಸಹಕರ ಪಡೆದುಕೊಳ್ಳುವಂತಾಗಬೇಕು ಎಂದು ತಿಳಿಸಿದರು.
ಸ್ಥಳೀಯಾಡಳಿತ ಇಲಾಖೆ ಜಂಟಿ ನಿರ್ದೇಶಕ ಸುಧಾಕರನ್ ಅದ್ಯಕ್ಷತೆ ವಹಿಸಿದ್ದರು. ಪ್ರೆಸ್ ಕ್ಲಬ್ ಅಧ್ಯಕ್ಷ ಸಿಜು ಕಣ್ಣನ್, ಕಾರ್ಯದರ್ಶಿ ಪ್ರದೀಪ್ ನಾರಾಯಣನ್, ಜಿಲ್ಲಾ ಶುಚಿತ್ವ ಮಿಷನ್ ಸಂಯೋಜಕ ಪಿ.ಜಯನ್ ಉಪಸ್ಥಿತರಿದ್ದರು. ಕೇರಳ ಘನತ್ಯಾಜ್ಯ ನಿರ್ವಹಣಾ ಜಿಲ್ಲಾ ಸಹಾಯಕ ಸಂಯೋಜಕ ಮಿಥುನ್ ಕೃಷ್ಣನ್, ಕ್ಲೀನ್ ಕೇರಳ ಕಂಪನಿ ಪ್ರತಿನಿಧಿ ಮಿಥುನ್ ಗೋಪಿ, ಜಿಲ್ಲಾ ಸಹಕಾರ್ಯದರ್ಶಿ ಎಚ್.ಕೃಷ್ಣನ್ ತರಗತಿ ನಡೆಸಿದರು.