ಕುಂಬಳೆ: ಮಕ್ಕಳಲ್ಲಿ ದೇಶಪ್ರೇಮವನ್ನು ಬೆಳೆಸುವ ಪ್ರಯತ್ನದೊಂದಿಗೆ ಶೈಕ್ಷಣಿಕವಾಗಿ ಬಹಳಷ್ಟು ಮುಂದುವರಿಯುತ್ತಿರುವ ಈ ಶಾಲೆಯ ಮಕ್ಕಳು ಎಲ್ಲಾ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳುತ್ತಿರುವುದು ಶ್ಲಾಘನೀಯ. ಎಳವೆಯಲ್ಲಿಯೇ ಗುಣಮಟ್ಟದ ಶಿಕ್ಷಣ ಮಕ್ಕಳಿಗೆ ದೊರೆತಾಗ ಅವರು ವಿಕಸಿತರಾಗಿ ದೇಶದ ಸತ್ಪ್ರಜೆಗಳಾಗಿ ಬಾಳುತ್ತಾರೆ. ಆಧುನಿಕ ತಂತ್ರಜ್ಞಾನಗಳನ್ನು ಅವಶ್ಯಕತೆಗಳಿಗಾಗಿ ಮಾತ್ರ ಉಪಯೋಗಿಸಬೇಕು ಎಂದು ಕಾಸರಗೋಡು ಜಿಲ್ಲಾ ಶಿಕ್ಷಣಾಧಿಕಾರಿ ದಿನೇಶ್ ವಿ. ಹೇಳಿದರು.
ಶನಿವಾರ ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದ ವಧ್ರ್ಯಂತ್ಯುತ್ಸವವನ್ನು ದೀಪಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಈ ಶೈಕ್ಷಣಿಕ ವರ್ಷದಲ್ಲಿ ವೃತ್ತಿಯಿಂದ ನಿವೃತ್ತರಾಗಲಿರುವ ಅವರನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ `ಬೆಳಕು' ಹಸ್ತಪ್ರತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿ, ಎಲ್‍ಎಸ್‍ಎಸ್ ಮತ್ತು ಯುಎಸ್‍ಎಸ್‍ನಂತಹ ಸ್ಕಾಲರ್‍ಶಿಪ್ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ವಿದ್ಯಾರ್ಥಿಗಳು ಬರೆಯಬೇಕು. ಹೆತ್ತವರು ಹಾಗೂ ಶಿಕ್ಷಕ ವೃಂದ ವಿದ್ಯಾರ್ಥಿಗಳ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸಬೇಕು. ಮಕ್ಕಳಿಗಾಗಿ ನಮ್ಮ ಸಮಯವನ್ನು ಮೀಸಲಿಡುವುದರೊಂದಿಗೆ ಅವರಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಉದಯವಾಣಿ ಪತ್ರಿಕೆಯ ಪ್ರಧಾನ ಸಂಪಾದಕ ರವಿಶಂಕರ ಭಟ್ ಕೋಡಿಮೂಲೆ ಮಾತನಾಡಿ ಗಡಿನಾಡಿನ ಮಣ್ಣಿನಲ್ಲಿ ಭಾಷೆಗಳಿಗೆ ಭದ್ರವಾದ ಬುನಾದಿಯಿದೆ. ಶಿಕ್ಷಣದ ಜೊತೆಗೆ ಮಕ್ಕಳಿಗೆ ಹೊರಜಗತ್ತಿನ ಪರಿಚಯ ಆಗಬೇಕು. ಬಾಲ್ಯದಲ್ಲಿಯೇ ಸಭಾ ಕಂಪನವನ್ನು ಹೋಗಲಾಡಿಸಿದಾಗ ಅವರು ಎಲ್ಲಾ ಕ್ಷೇತ್ರಗಳಲ್ಲೂ ಹೊರಜಗತ್ತಿಗೆ ತೆರೆದುಕೊಳ್ಳುತ್ತಾರೆ ಎಂದರು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಬೆಜಪ್ಪೆ ಕಿದೂರು ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಬೋನಂತಾಯ ಶಿವಶಂಕರ ಭಟ್ ಪುತ್ತೂರು, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಭಟ್ ಚೆಕ್ಕಣಿಕೆ ಶುಭಹಾರೈಸಿದರು. ಶಾಲಾ ಆಡಳಿತ ಮಂಡಳಿ ಜೊತೆಕಾರ್ಯದರ್ಶಿ ಬಾಲಕೃಷ್ಣ ಶರ್ಮ ಅನಂತಪುರ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಎನ್.ರಾವ್ ಮನ್ನಿಪ್ಪಾಡಿ, ಶ್ಯಾಮರಾಜ್ ದೊಡ್ಡಮಾಣಿ, ರವಿನಾರಾಯಣ ಗುಣಾಜೆ, ಎಚ್.ಎಸ್. ಪ್ರಸಾದ ಹಿಳ್ಳೆಮನೆ, ಮುಳ್ಳೇರಿಯ ಮಂಡಲ ಅಧ್ಯಕ್ಷ ಕೃಷ್ಣಮೂರ್ತಿ ಮಾಡಾವು ಹಾಗೂ ಗಣ್ಯರು ಪಾಲ್ಗೊಂಡಿದ್ದರು. ಅಧ್ಯಾಪಿಕೆ ಅನ್ವಿತಾ ಕೆ. ಸ್ವಾಗತಿಸಿ, ಮುಖ್ಯೋಪಾಧ್ಯಾಯ ಶ್ಯಾಂ ಭಟ್ ದರ್ಭೆ ಮಾರ್ಗ ವಂದಿಸಿದರು. ವಿದ್ಯಾರ್ಥಿ ಶಾಶ್ವತ್ ನಿರೂಪಿಸಿದರು. ಸಹ ಮುಖ್ಯೋಪಾಧ್ಯಾಯಿನಿ ಚಿತ್ರಾಸರಸ್ವತಿ ವಾರ್ಷಿಕ ವರದಿ ಮಂಡಿಸಿದರು. ನಂತರ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮದ ಮೂಲಕ ಪ್ರತಿಭಾ ಪ್ರದರ್ಶನ ನಡೆಯಿತು.