ನವದೆಹಲಿ: ರಕ್ಷಣಾ ಸಚಿವ ರಾಜನಾಥ ಸಿಂಗ್ ಮತ್ತು ಅಮೆರಿಕದ ರಾಷ್ಟ್ರೀಯ ಗುಪ್ತಚರದ ನಿರ್ದೇಶಕಿ ತುಳಸಿ ಗಬಾರ್ಡ್ ಅವರು ರಕ್ಷಣೆ ಹಾಗೂ ಮಾಹಿತಿ ಹಂಚಿಕೆ ಕ್ಷೇತ್ರಗಳು ಸೇರಿದಂತೆ ಭಾರತ-ಅಮೆರಿಕ ನಡುವಿನ ಒಟ್ಟಾರೆ ಕಾರ್ಯತಂತ್ರದ ಸಂಬಂಧ ಬಲಪಡಿಸುವ ಬಗ್ಗೆ ಸೋಮವಾರ ಮಾತುಕತೆ ನಡೆಸಿದರು.
ಡೊನಾಲ್ಡ್ ಟ್ರಂಪ್ ಅವರ ಎರಡನೇ ಅವಧಿಯ ಆಡಳಿತದಲ್ಲಿ ಅಮೆರಿಕದ ಉನ್ನತ ಅಧಿಕಾರಿಯೊಬ್ಬರು ಭಾರತಕ್ಕೆ ನೀಡಿದ ಮೊದಲ ಭೇಟಿ ಇದಾಗಿದೆ.
ಅಮೆರಿಕದ ರಾಷ್ಟ್ರೀಯ ಗುಪ್ತಚರದ ನಿರ್ದೇಶಕಿಯನ್ನು ಭೇಟಿಯಾಗಲು ಸಂತಸವಾಗುತ್ತಿದೆ ಎಂದು ರಾಜನಾಥ್ ಅವರು ಸಾಮಾಜಿಕ ಮಾಧ್ಯಮದ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. 'ಭಾರತ-ಅಮೆರಿಕ ಪಾಲುದಾರಿಕೆಯನ್ನು ಇನ್ನಷ್ಟು ಬಲಪಡಿಸುವ ಅವಕಾಶಗಳ ಬಗ್ಗೆ ಚರ್ಚಿಸಿದ್ದೇವೆ. ರಕ್ಷಣೆ ಮತ್ತು ಮಾಹಿತಿ ಹಂಚಿಕೆ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಮಾತುಕತೆ ನಡೆಯಿತು' ಎಂದಿದ್ದಾರೆ.
ಗಬಾರ್ಡ್ ಅವರು ಭಾನುವಾರ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ಅವರನ್ನು ಭೇಟಿಯಾದರಲ್ಲದೆ, ನವದೆಹಲಿಯಲ್ಲಿ ನಡೆದ ಗುಪ್ತಚರ ವಿಭಾಗದ ಮುಖ್ಯಸ್ಥರ ಜಾಗತಿಕ ಸಮಾವೇಶದಲ್ಲಿ ಪಾಲ್ಗೊಂಡರು.
ಡೊಭಾಲ್ ಮತ್ತು ಗಬಾರ್ಡ್ ಅವರು ಗುಪ್ತಚರ ಮಾಹಿತಿ ಹಂಚಿಕೆ ವಿಚಾರದಲ್ಲಿ ಉಭಯ ದೇಶಗಳ ನಡುವಿನ ಸಂಬಂಧವನ್ನು ಬಲಪಡಿಸುವ ಬಗ್ಗೆ ಮಾತುಕತೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.
ಡೊಭಾಲ್ ಅಧ್ಯಕ್ಷತೆಯಲ್ಲಿ ಭಾರತ ಆಯೋಜಿಸಿದ ಗುಪ್ತಚರ ಮುಖ್ಯಸ್ಥರ ಸಮಾವೇಶದಲ್ಲಿ ಪಾಲ್ಗೊಂಡವರಲ್ಲಿ ಕೆನಡಾದ ಗುಪ್ತಚರ ವಿಭಾಗದ ಮುಖ್ಯಸ್ಥ ಡೇನಿಯಲ್ ರೋಜರ್ಸ್ ಮತ್ತು ಬ್ರಿಟನ್‌ನ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೊನಾಥನ್ ಪೊವೆಲ್ ಅವರೂ ಸೇರಿದ್ದಾರೆ.
ಖಾಲಿಸ್ತಾನಿ ಪರ ಹೋರಾಟ ಸೇರಿದಂತೆ ವಿದೇಶಿ ನೆಲದಲ್ಲಿ ನಡೆಯುತ್ತಿರುವ ಭಾರತ ವಿರೋಧಿ ಚಟುವಟಿಕೆಗಳ ಬಗ್ಗೆ ಡೊಭಾಲ್ ಅವರು ಸಭೆಯಲ್ಲಿ ಕಳವಳ ವ್ಯಕ್ತಪಡಿಸಿದರು ಎಂದು ಮೂಲಗಳು ಹೇಳಿವೆ.