ಮಾಸ್ಕೊ: ಮೂರು ವರ್ಷಗಳಿಂದ ನಡೆಯುತ್ತಿರುವ ಯುದ್ಧಕ್ಕೆ ಅಂತ್ಯ ಹಾಡುವುದಕ್ಕಾಗಿ ಮಾತುಕತೆ ನಡೆಸಲು ಸಿದ್ಧ ಎಂಬುದಾಗಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಹೇಳಿರುವುದು ಈ ನಿಟ್ಟಿನಲ್ಲಿನ 'ಸಕಾರಾತ್ಮಕ ಹೆಜ್ಜೆ' ಎಂದು ರಷ್ಯಾ ಬುಧವಾರ ಹೇಳಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್.'ಸಾಮಾನ್ಯವಾಗಿ, ಶಾಂತಿ ಸ್ಥಾಪನೆ ಉದ್ದೇಶಕ್ಕೆ ಇಂತಹ ವಿಧಾನದ ಮೊರೆ ಹೋಗಲಾಗುತ್ತದೆ.ಇದು ಸಕಾರಾತ್ಮಕವಾದ ಹೆಜ್ಜೆ' ಎಂದಿದ್ದಾರೆ.
'ಆದರೆ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆ ನೇರ ಮಾತುಕತೆ ಸಾಧ್ಯವಿಲ್ಲ ಎಂಬುದಾಗಿ, ಝೆಲೆನ್‌ಸ್ಕಿ ಅವರು ಹೊರಡಿಸಿರುವ ಆದೇಶವೊಂದರಲ್ಲಿ ಹೇಳಲಾಗಿದೆ' ಎಂದೂ ಪೆಸ್ಕೋವ್ ಹೇಳಿದ್ದಾರೆ.
'ಶಾಶ್ವತ ಶಾಂತಿ ಸ್ಥಾಪನೆಗಾಗಿ ಮಾತುಕತೆ ನಡೆಸುವುದಕ್ಕೆ ಸಿದ್ಧ' ಎಂದು ಝೆಲೆನ್‌ಸ್ಕಿ ಮಂಗಳವಾರ ಹೇಳಿದ್ದರು. ಇದಕ್ಕೆ ರಷ್ಯಾ ಕೂಡ ಈಗ ಪ್ರತಿಕ್ರಿಯಿಸಿರುವುದು ಗಮನಾರ್ಹ.
ವೊಲೊಡಿಮಿರ್ ಝೆಲೆನ್‌ಸ್ಕಿ ಉಕ್ರೇನ್ ಅಧ್ಯಕ್ಷ ನಮ್ಮ ಜನರಿಗೆ ಸುರಕ್ಷಿತವಾದ ಭವಿಷ್ಯ ಬೇಕಾಗಿದೆ. ತಾತ್ಕಾಲಿಕ ಕದನವಿರಾಮ ಅಗತ್ಯವಿಲ್ಲ. ಶಾಶ್ವತವಾಗಿ ಯುದ್ಧಕ್ಕೆ ಅಂತ್ಯ ಹಾಡಬೇಕಾಗಿದೆ. ಅಮೆರಿಕದ ನೇತೃತ್ವ ಮತ್ತು ನಮ್ಮ ಸತತ ಪ್ರಯತ್ನಗಳಿಂದ ಇದು ಸಾಧ್ಯವಾಗಲಿದೆ.