ಕೀವ್: ರಷ್ಯಾ ಸೇನೆ ಉಕ್ರೇನ್‌ನ ಹಲವು ನಗರಗಳ ಮೇಲೆ ರಾತ್ರೋರಾತ್ರಿ ಡ್ರೋನ್ ಹಾಗೂ ಬಾಂಬ್ ದಾಳಿ ನಡೆಸಿದೆ. ಈ ದಾಳಿಯನ್ನು ಖಂಡಿಸಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ, ರಷ್ಯಾ ಮೇಲೆ ಒತ್ತಡವನ್ನು ಹೆಚ್ಚಿಸಬೇಕಿದೆ ಎಂದು ಜಾಗತಿಕ ಸಮುದಾಯವನ್ನು ಒತ್ತಾಯಿಸಿದ್ದಾರೆ.
ಸುಮಾರು 214 ಡ್ರೋನ್‌ಗಳ ಮೂಲಕ ಉಕ್ರೇನ್ ನಗರಗಳ ಮೇಲೆ ಗುರುವಾರ ರಾತ್ರಿ ದಾಳಿ ನಡೆದಿದೆ.
'ರಷ್ಯಾ ಮೇಲೆ ಒತ್ತಡವನ್ನು ಹೆಚ್ಚಿಸುವುದರ ಜೊತೆಗೆ ಕಠಿಣ ನಿರ್ಬಂಧಗಳನ್ನು ಹೇರಬೇಕು. ಹಾಗೆಯೇ, ನಮ್ಮ ದೇಶಕ್ಕೆ ಬಲವಾದ ರಕ್ಷಣಾ ಬೆಂಬಲವನ್ನು ನೀಡಬೇಕು. ಇದರಿಂದ, ಈ ರೀತಿಯ ಉಗ್ರಕೃತ್ಯಗಳನ್ನು ಕೊನೆಗಾಣಿಸಲು ಸಾಧ್ಯ' ಎಂದು ಸಾಮಾಜಿಕ ಮಾಧ್ಯಮದ ಮೂಲಕ ಒತ್ತಾಯಿಸಿದ್ದಾರೆ.
ರಷ್ಯಾ-ಉಕ್ರೇನ್ ಕದನ ವಿರಾಮ ಘೋಷಣೆ ಸಂಬಂಧ ಮಾತುಕತೆಗಳು ಪ್ರಗತಿಯಲ್ಲಿವೆ. ಇದೇ ವಿಚಾರವಾಗಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಮಂಗಳವಾರ ಸುದೀರ್ಘ ಮಾತುಕತೆ ನಡೆಸಿದ್ದರು.
ಆ ವೇಳೆ, 30 ದಿನ ಕದನವಿರಾಮ ಘೋಷಿಸಬೇಕು ಎಂಬ ಟ್ರಂಪ್ ಪ್ರಸ್ತಾವವನ್ನು ಪುಟಿನ್ ತಳ್ಳಿಹಾಕಿದ್ದರು. ಅದರ ಬೆನ್ನಲ್ಲೇ, ರಷ್ಯಾದ ಸೇನೆ ಉಕ್ರೇನ್‌ನ ವಿವಿಧ ನಗರಗಳ ಮೇಲೆ ಬುಧವಾರವೂ ಸರಣಿ ಡ್ರೋನ್ ದಾಳಿ ನಡೆಸಿತ್ತು.
ದಾಳಿಯಿಂದಾಗಿ ಉಕ್ರೇನ್‌ನಲ್ಲಿ ಆಸ್ಪತ್ರೆಗಳು, ಇಂಧನ ಮೂಲಸೌಕರ್ಯಗಳಿಗೆ ಹಾನಿಯಾಗಿದೆ ಎಂದು ಝೆಲೆನ್‌ಸ್ಕಿ ಹೇಳಿದ್ದರು.