ಮಧೂರು : ಸಾಮಾಜಿಕ ಸಾಮರಸ್ಯಕ್ಕೆ ಮಧೂರು ಕ್ಷೇತ್ರ ಮಹತ್ವದ ಕೊಡುಗೆ ನೀಡುತ್ತಿರುವುದಗಿ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ತಿಳಿಸಿದ್ದಾರೆ. ಅವರು ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆ ಅಂಗವಾಗಿ ನಡೆಯಲಿರುವ ಧಾರ್ಮಿಕ-ಸಾಂಸ್ಕøತಿಕ ಕಾರ್ಯಕ್ರಮಗಳ ಉದ್ಘಾಟನೆ ನೆರವೇರಿಸಿ ಆಶೀರ್ವಚನ ನೀಡಿದರು.
ಆರಾಧನಾಲಯಗಳು ಜನರ ಭಕ್ತಿ-ಶ್ರದ್ಧೆಯ ಕೇಂದ್ರಗಳಾಗಿದ್ದು, ಕ್ಷೇತ್ರದ ಪಾವಿತ್ರ್ಯತೆ ಕಾಪಾಡುವ ಮಹತ್ತರ ಜವಾಬ್ದಾರಿ ನಮ್ಮೆಲ್ಲರದಾಗಿದೆ. ಜನರಲ್ಲಿನ ಸ್ವಪ್ರತಿಷ್ಠೆಯಿಂದ ಸಮಾಜದಲ್ಲಿ ಅನಾಹುತಗಳಿಗೆ ಕಾರಣವಾಗುತ್ತಿದೆ. ನಮ್ಮ ಅಂತರಂಗದಲ್ಲಿ ದೇವ ಪ್ರತಿಷ್ಠೆಯಾಗಬೇಕೇ ಹೊರತು ಸ್ವಪ್ರತಿಷ್ಠೆಯಲ್ಲ ಎಂದು ತಿಳಿಸಿದರು. ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡಿ, ಹಲವು ವರ್ಷಗಳ ನಂತರ ಮಧೂರು ಮಹಾಗಣಪತಿ ಸನ್ನಿಧಿ ಇಂದು ಬ್ರಹ್ಮಕಲಶೋತ್ಸವದ ಸಂಭ್ರಮದೊಂದಿಗೆ ಲೋಕಹಿತದ ಅನುಗ್ರಹ ಶಕ್ತಿ ಪ್ರಾಪ್ತವಾಗಿರುವುದು ನಮ್ಮೆಲ್ಲರ ಪುಣ್ಯ ಎಂದು ತಿಳಿಸಿದರು. ಉಪ್ಪಳ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ. ಬಿ.ಎಸ್ ರಾವ್ ಅಧ್ಯಕ್ಷತೆ ವಹಿಸಿದ್ದರು.
ಮುಂಡಪ್ಪಳ್ಳ ಶ್ರೀರಾಜರಾಜೇಶ್ವರೀ ಕ್ಷೇತ್ರದ ಆಡಳಿತ ಮೊಕ್ತೇಸರ ಕೆ.ಕೆ ಶೆಟ್ಟಿ, ಮಧೂರು ಕ್ಷೇತ್ರ ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಮಹಾಬಲೇಶ್ವರ ಭಟ್ ಎಡಕ್ಕಾನ ಗೌರವ ಉಪಸ್ಥಿತರಿದ್ದರು. ಬೆಂಗಳೂರು ಉಚ್ಛ ನ್ಯಾಯಾಳಯದ ವಕೀಲ ಬಾರಿ ಭಂಡಾರಿ, ವಾಸ್ತು ವಿದ್ಯಾಕುಲಪತಿ ಕಾಣಿಪಯ್ಯೂರು ಬ್ರಹ್ಮಶ್ರೀ ಕೃಷ್ಣನ್ ನಂಬೂದಿರಿ, ವಾಸ್ತು ಶಿಲ್ಪಿ ಕೃಷ್ಣ ಪ್ರಸಾದ್ ಮುನಿಯಂಗಳ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಮಂಜುನಾಥ ಕಾಮತ್, ಉಪಾಧ್ಯಕ್ಷ ಎಂ.ಶಂಕರನಾರಾಯಣ ಭಟ್ ಅಳಕೆ, ಉದ್ಯಮಿ ಈಶ್ವರ ಭಟ್ ವಿಟ್ಲ, ಎ.ಡಿ ಶೆಟ್ಟಿ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ ಸ್ವಾಗತಿಸಿದರು. ಅಪ್ಪಯ್ಯ ನಯ್ಕ ಮಧೂರು ಹಾಗೂ ಜಗದೀಶ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ದಾಮೋದರ ಡಿ. ವಂದಿಸಿದರು.