ಮಾಸ್ಕೊ: ಯುದ್ಧವನ್ನು ಅಂತ್ಯಗೊಳಿಸಿ ಶಾಂತಿ ಒಪ್ಪಂದಕ್ಕೆ ಬರಲು ಉಕ್ರೇನ್‌ನಲ್ಲಿ ತಾತ್ಕಾಲಿಕ ಆಡಳಿತವನ್ನು ಸ್ಥಾಪಿಸಿ, ಚುನಾವಣೆಗೆ ಅನುವು ಮಾಡಿಕೊಡಬೇಕು ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸಲಹೆ ನೀಡಿದ್ದಾರೆ ಎಂದು ರಷ್ಯಾದ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಮುರ್ಮನ್ಸ್ಕ್‌ನ ಉತ್ತರ ಬಂದರಿನಲ್ಲಿ ಮಾತನಾಡಿದ ಪುಟಿನ್, ರಷ್ಯಾದೊಂದಿಗೆ ಸಂಬಂಧವನ್ನು ಸುಧಾರಿಸಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮೂರು ವರ್ಷಗಳಿಗೂ ಹೆಚ್ಚು ಕಾಲದ ಸಂಘರ್ಷವನ್ನು ಕೊನೆಗೊಳಿಸಲು ಪ್ರಾಮಾಣಿಕವಾಗಿ ಬಯಸಿದ್ದಾರೆ ಎಂದು ನಂಬಿರುವುದಾಗಿ ಹೇಳಿದ್ದಾರೆ.
ಸಂಘರ್ಷದಲ್ಲಿ ರಷ್ಯಾ ತನ್ನ ಗುರಿಗಳನ್ನು ಸಾಧಿಸುವತ್ತ ಸ್ಥಿರವಾಗಿ ಸಾಗುತ್ತಿದೆ ಎಂದು ಅವರು ಹೇಳಿದ್ದಾರೆ.
2024ರ ಮೇನಲ್ಲೇ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅಧಿಕಾರಾವಧಿ ಮುಗಿದಿದ್ದರೂ ಈಗಲೂ ಅಧಿಕಾರದಲ್ಲಿ ಮುಂದುವರಿದಿರುವುದರಿಂದ ಉಕ್ರೇನ್‌ನ ಅಧಿಕಾರಿಗಳು ಕಾನೂನುಬದ್ಧ ಮಾತುಕತೆಯ ಪಾಲುದಾರರಲ್ಲ ಎಂಬ ತಮ್ಮ ದೀರ್ಘಕಾಲದ ವಾದಕ್ಕೆ ಇಂಬು ನೀಡಿದಂತೆ ತಾತ್ಕಾಲಿಕ ಆಡಳಿತದ ಕುರಿತು ಪುಟಿನ್ ಪ್ರಸ್ತಾಪಿಸಿದ್ದಾರೆ.
'ತಾತ್ವಿಕವಾಗಿ, ವಿಶ್ವಸಂಸ್ಥೆಯು ಯುರೋಪಿಯನ್ ದೇಶಗಳು ಮತ್ತು ನಮ್ಮ ಪಾಲುದಾರ ದೇಶಗಳ ಆಶ್ರಯದಲ್ಲಿ ಉಕ್ರೇನ್‌ನಲ್ಲಿ ತಾತ್ಕಾಲಿಕ ಆಡಳಿತವನ್ನು ಪರಿಚಯಿಸಬಹುದು'ಎಂದು ಬಂದರಿನಲ್ಲಿ ನಾವಿಕರೊಂದಿಗೆ ನಡೆದ ಮಾತುಕತೆಯಲ್ಲಿ ಪುಟಿನ್ ಹೇಳಿರುವುದಾಗಿ ಉಲ್ಲೇಖಿಸಲಾಗಿದೆ.
'ಅದು ಪ್ರಜಾಸತ್ತಾತ್ಮಕ ಚುನಾವಣೆಗಳನ್ನು ನಡೆಸಲು ಮತ್ತು ಜನರ ನಂಬಿಕೆಯನ್ನು ಹೊಂದಿರುವ ಸಮರ್ಥ ಸರ್ಕಾರವನ್ನು ಅಧಿಕಾರಕ್ಕೆ ತರಲು ಹಾಗೂ ನಂತರ ಶಾಂತಿ ಒಪ್ಪಂದದ ಬಗ್ಗೆ ಅವರೊಂದಿಗೆ ಮಾತುಕತೆಗಳನ್ನು ಪ್ರಾರಂಭಿಸಲು ನೆರವಾಗುತ್ತದೆ'ಎಂದು ಅವರು ಹೇಳಿದ್ದಾರೆ.