ನವದೆಹಲಿ: ದೇಶದಲ್ಲಿ ಬಿಜೆಪಿ ನೇತೃತ್ವದ ಡಬಲ್ ಎಂಜಿನ್ ಸರ್ಕಾರವು ಹೆಣ್ಣು ಮಕ್ಕಳಿಗೆ ಶಾಪವಾಗಿ ಮಾರ್ಪಟ್ಟಿದ್ದು. ಮಹಿಳೆಯರ ಸುರಕ್ಷತೆಯ ಬಗ್ಗೆ ಕಾಂಗ್ರೆಸ್ ಕಳವಳ ವ್ಯಕ್ತಪಡಿಸಿದೆ.
ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮುಖ್ಯಸ್ಥೆ ಅಲ್ಕಾ ಲಂಬಾ, ಕೇಂದ್ರ ಸಚಿವರ ಪುತ್ರಿ ಮೇಲಿನ ಕಿರುಕುಳದ ನಂತರ ದೇಶದಲ್ಲಿ ಮಹಿಳೆಯ ಸುರಕ್ಷತೆಯ ಬಗ್ಗೆ ಪ್ರಶ್ನಿಸಿದ್ದು, ಮಹಾರಾಷ್ಟ್ರ, ಗುಜರಾತ್, ಹರಿಯಾಣ ಮತ್ತು ರಾಜಸ್ಥಾನದಂತಹ ರಾಜ್ಯಗಳಲ್ಲಿ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳ ಅಂಕಿಅಂಶಗಳನ್ನು ಉಲ್ಲೇಖಿಸಿ ವಾಗ್ದಾಳಿ ನಡೆಸಿದ್ದಾರೆ.
'ಕೇಂದ್ರ ಸಚಿವರ ಮಗಳು ಮತ್ತು ಆಕೆಯ ಗೆಳತಿಯರಿಗೆ ಕಿರುಕುಳ ನೀಡಿದ ಪ್ರಕರಣವು ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ವರದಿಯಾಗಿತ್ತು. ಬಳಿಕ ಎಫ್‌ಐಆರ್ ದಾಖಲಿಸಲಾಗಿತ್ತು. ಲೈಂಗಿಕ ಕಿರುಕುಳ ನೀಡಿದ ಆರೋಪಿಯು ಬಿಜೆಪಿಯ ಮಾಜಿ ಕೌನ್ಸಿಲರ್ ಆಗಿದ್ದು, ಮಹಾರಾಷ್ಟ್ರದ ಮುಖ್ಯಮಂತ್ರಿ ಸೇರಿದಂತೆ ಅನೇಕ ನಾಯಕರ ಜತೆ ಗುರುತಿಸಿಕೊಂಡಿದ್ದಾನೆ' ಎಂದು ಲಂಬಾ ಆರೋಪಿಸಿದ್ದಾರೆ.
'ಹೆಣ್ಣುಮಕ್ಕಳ ಪರವಾಗಿ ಯಾರು ನಿಲ್ಲುತ್ತಾರೋ ಇಲ್ಲವೋ? ಆದರೆ ಕಾಂಗ್ರೆಸ್ ಪಕ್ಷ ಮತ್ತು ಮಹಿಳಾ ಕಾಂಗ್ರೆಸ್ ಖಂಡಿತವಾಗಿಯೂ ಅವರ ಪರವಾಗಿ ನಿಲ್ಲುತ್ತದೆ' ಎಂದು ಲಂಬಾ ಪ್ರತಿಪಾದಿಸಿದರು.
'ಜಿಲ್ಲೆಯ ಕೊಥಾಲಿ ಗ್ರಾಮದಲ್ಲಿ ಸಂತ ಮುಕ್ತಾಯಿ ಯಾತ್ರೆಗೆ ತೆರಳಿದ್ದ ನನ್ನ ಪುತ್ರಿ, ಆಕೆಯ ಗೆಳತಿಯರಿಗೆ ಶುಕ್ರವಾರ ರಾತ್ರಿ ಬಾಲಕರ ಗುಂಪು ಕಿರುಕುಳ ನೀಡಿದೆ' ಎಂದು ಕೇಂದ್ರ ಸಚಿವೆ ರಕ್ಷಾ ಖಡಸೆ ಆರೋಪಿಸಿದ್ದು, ಪೊಲೀಸರಿಗೆ ದೂರು ನೀಡಿದ್ದರು.
ಈ ಕುರಿತು ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು, ಆರೋಪಿಗಳು ರಾಜಕೀಯ ಪಕ್ಷವೊಂದಕ್ಕೆ ಸೇರಿದವರು. ಪ್ರಕರಣ ದಾಖಲಿಸಿದ್ದು, ಕೆಲವರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದರು.
'ಪುತ್ರಿ ಮತ್ತು ಅವಳ ಗೆಳತಿಯರು ಯಾತ್ರೆಗೆ ಹೋಗಿದ್ದರು. ಜೊತೆಗೆ ಮೂವರು ಸಿಬ್ಬಂದಿ ಇದ್ದರು. ಪುತ್ರಿ ಮತ್ತು ಆಕೆಯ ಗೆಳತಿಯರನ್ನು ಹಿಂಬಾಲಿಸಿರುವ ಗುಂಪು ಅವರನ್ನು ತಳ್ಳಿ ಕಿರುಕುಳ ನೀಡಿದೆ. ಫೋಟೊ, ವಿಡಿಯೊ ತೆಗೆದುಕೊಂಡಿದೆ. ಸಿಬ್ಬಂದಿ ಆಕ್ಷೇಪಿಸಿದಾಗ, ಯುವಕರು ಅನುಚಿತವಾಗಿ ವರ್ತಿಸಿದ್ದಾರೆ. ಗೊಂದಲ ಸ್ಥಿತಿ ಮೂಡಿದಾಗ 30 ರಿಂದ 40 ಜನರು ಗುಂಪುಗೂಡಿದ್ದಾರೆ' ಎಂದು ವಿವರಿಸಿದ್ದರು.