ನವದೆಹಲಿ: ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಮೀಸಲು ನೀಡಿರುವ ಕರ್ನಾಟಕ ಸರ್ಕಾರದ ಕ್ರಮ ಅಸಾಂವಿಧಾನಿಕ, ದುಸ್ಸಾಹಸ ಎಂದು ಅಭಿಪ್ರಾಯಪಟ್ಟಿರುವ ಬಿಜೆಪಿ, 'ಈ ವಿಷಯವನ್ನು ಸಂಸತ್‌ನಲ್ಲಿ ಪ್ರಸ್ತಾಪಿಸಲಾಗುವುದು. ಸದನದ ಹೊರಗೆ ಸಹ ಹೋರಾಟ ನಡೆಸಲಾಗುವುದು' ಎಂದು ಘೋಷಿಸಿದೆ.
ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಸಂಸದರಾದ ತೇಜಸ್ವಿ ಸೂರ್ಯ, ಪಿ.ಸಿ.ಮೋಹನ್, ಬ್ರಿಜೇಶ್ ಚೌಟ ಹಾಗೂ ಸಿ.ಎನ್.ಮಂಜುನಾಥ್, 'ಕರ್ನಾಟಕ ಕಾಂಗ್ರೆಸ್ ಸರ್ಕಾರ ಓಲೈಕೆ ರಾಜಕಾರಣದಲ್ಲಿ ತೊಡಗಿದೆ. ಈ ಕ್ರಮವು ಸಂವಿಧಾನಬಾಹಿರ ಹಾಗೂ ಸಂವಿಧಾನ ನಿರ್ಮಾತೃಗಳು ರೂಪಿಸಿದ ತತ್ವಗಳಿಗೆ ವಿರುದ್ಧ' ಎಂದು ಕಿಡಿಕಾರಿದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒತ್ತಡಕ್ಕೆ ಮಣಿದು ಕಾಂಗ್ರೆಸ್ ಸರ್ಕಾರ ಈ ತೀರ್ಮಾನ ತೆಗೆದುಕೊಂಡಿದೆ ಎಂದು ದೂರಿದರು.
'ಈ ಕಾನೂನುಬಾಹಿರ ನಿರ್ಧಾರವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು. ನಮ್ಮ ಪಕ್ಷವು ವಿಧಾನಮಂಡಲ ಹಾಗೂ ಸಂಸತ್‌ನಲ್ಲಿ ಈ ವಿಷಯ ಪ್ರಸ್ತಾಪಿಸಿ ಹೋರಾಟ ಮಾಡಲಿದೆ' ಎಂದು ತೇಜಸ್ವಿ ಸೂರ್ಯ ತಿಳಿಸಿದರು. ಸರ್ಕಾರ ತನ್ನ ತೀರ್ಮಾನವನ್ನು ವಾಪಸ್ ಪಡೆಯುವ ತನಕ ಹೋರಾಟ ಮುಂದುವರಿಯಲಿದೆ ಎಂದು ಅವರು ಹೇಳಿದರು.
ಕರ್ನಾಟಕ ಸರ್ಕಾರದ ಈ ಕ್ರಮವು ರಾಷ್ಟ್ರೀಯ ಸಮಗ್ರತೆ, ಏಕತೆ ಮತ್ತು ಸಾರ್ವಭೌಮತ್ವಕ್ಕೆ ಬೆದರಿಕೆಯಾಗಿದೆ ಎಂದು ಅವರು ದೂರಿದರು.
ಬ್ರಿಜೇಶ್ ಚೌಟ ಮಾತನಾಡಿ, 'ನಮ್ಮ ದೇಶದಲ್ಲಿ ಮತ-ಧರ್ಮಗಳ ಆಧಾರದ ಮೇಲೆ ಈ ರೀತಿ ಮೀಸಲಾತಿ ನೀಡುವುದಕ್ಕೆ ಅವಕಾಶ ಇಲ್ಲ. ಈ ವಿಚಾರವಾಗಿ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಧರ್ಮ ಆಧರಿಸಿ ಮೀಸಲಾತಿ ನೀಡುವುದನ್ನು ಅಂಬೇಡ್ಕರ್ ವಿರೋಧಿಸಿದ್ದರು. ಈ ಹಿಂದೆ ಹಲವು ರಾಜ್ಯಗಳು ಧರ್ಮಾಧಾರಿತ ಮೀಸಲಾತಿ ನೀಡಲು ಪ್ರಯತ್ನ ನಡೆಸಿದ್ದವು. ಆದರೆ, ಅದಕ್ಕೆ ನ್ಯಾಯಾಲಯಗಳು ತಡೆಯಾಜ್ಞೆ ನೀಡಿದ್ದವು' ಎಂದರು.