ನವದೆಹಲಿ :ಎಲ್ಲಾ ಸರಕಾರಿ ನೇಮಕಾತಿಗೆ ಏಕ 'ಉದ್ಯೋಗ ಅರ್ಜಿ ಪೋರ್ಟಲ್' ಅನ್ನು ರೂಪಿಸಲು ಕೇಂದ್ರ ಸರಕಾರ ಕಾರ್ಯಾರಂಭಿಸಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಶನಿವಾರ ತಿಳಿಸಿದ್ದಾರೆ.
ಉದ್ಯೋಗಾಕಾಂಕ್ಷಿಗಳ ಹೊರೆ ಕಡಿಮೆ ಮಾಡುವುದು ಈ ಪೋರ್ಟಲ್ನ ಹಿಂದಿನ ಉದ್ದೇಶ.
ಅವರು ಬಹು ವೇದಿಕೆಗಳಲ್ಲಿ ಅರ್ಜಿ ಸಲ್ಲಿಸುವುದರಿಂದ ಸಮಯ ಹಾಗೂ ಶಕ್ತಿಯನ್ನು ಉಳಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಇಲ್ಲಿನ ನಾರ್ತ್ ಬ್ಲಾಕ್ನಲ್ಲಿ ಸಿಬ್ಬಂದಿ ಹಾಗೂ ತರಬೇತಿ ಇಲಾಖೆ (ಡಿಒಪಿಟಿ)ಯ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿಂಗ್, ನೇಮಕಾತಿ ಪ್ರಕ್ರಿಯೆಯನ್ನು ಸರಳೀಕರಿಸುವ ಹಾಗೂ ತಂತ್ರಜ್ಞಾನ ಆಧರಿತ ಸುಧಾರಣೆಗಳ ಮೂಲಕ ಆಡಳಿತವನ್ನು ಸಬಲಗೊಳಿಸುವ ಸರಕಾರದ ಬದ್ಧತೆಯನ್ನು ಒತ್ತಿ ಹೇಳಿದರು.
''ಇದರ ಕಾರ್ಯ ಈಗಾಗಲೇ ಆರಂಭವಾಗಿದೆ. ನಾವು ಸಮಯ ಮಿತಿಯೊಳಗೆ ಕೆಲಸವನ್ನು ಪೂರ್ಣಗೊಳಿಸಲು ಪ್ರಯತ್ನಿಸಲಿದ್ದೇವೆ. ಇದು ಉದ್ಯೋಕಾಂಕ್ಷಿಗಳಿಗೆ ಸಾಕಷ್ಟು ನೆರವು ನೀಡಲಿದೆ'' ಎಂದು ಸಚಿವರು ತಿಳಿಸಿದರು.
2014ಕ್ಕಿಂತ ಹಿಂದೆ ಹಿಂದಿ ಹಾಗೂ ಇಂಗ್ಲಿಷ್ ಭಾಷೆಗೆ ಮಾತ್ರ ಸೀಮಿತವಾಗಿದ್ದ ನೇಮಕಾತಿ ಪರೀಕ್ಷೆಗಳನ್ನು 13 ಪ್ರಾದೇಶಿಕ ಭಾಷೆಗಳಿಗೆ ವಿಸ್ತರಿಸಿದ ಪ್ರಮುಖ ನಡೆಯನ್ನು ಅವರು ಪ್ರಶಂಸಿಸಿದರು. ''ಶೀಘ್ರದಲ್ಲಿ ನಾವು 8ನೇ ಪರಿಚ್ಚೇದದಲ್ಲಿ ಉಲ್ಲೇಖಿಸಿದ ಎಲ್ಲಾ 22 ಭಾಷೆಗಳನ್ನು ಸೇರಿಸಲಿದ್ದೇವೆ'' ಎಂದು ಸಚಿವರು ಹೇಳಿದರು.
ಸರಾಸರಿ ನೇಮಕಾತಿ ಆವರ್ತನದ ಸಮಯವನ್ನು 15 ತಿಂಗಳಿಂದ 8 ತಿಂಗಳಿಗೆ ಇಳಿಕೆ ಮಾಡಲಾಗಿದೆ. ಇದನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಇಳಿಕೆ ಮಾಡುವ ಕುರಿತು ಚಿಂತಿಸಲಾಗಿದೆ ಎಂದು ಸಿಂಗ್ ತಿಳಿಸಿದರು.