ಕಾಬೂಲ್: ಅಫ್ಘಾನಿಸ್ತಾನದಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೇರಿರುವ ನಿಷೇಧವನ್ನು ಹಿಂಪಡೆಯಬೇಕೆಂದು ವಿಶ್ವಸಂಸ್ಥೆಯು ತಾಲಿಬಾನ್‌ಗೆ ಹೇಳಿದೆ.
ಅಫ್ಘಾನಿಸ್ತಾನವನ್ನು 2021ರಲ್ಲಿ ವಶಕ್ಕೆ ಪಡೆದ ತಾಲಿಬಾನ್ ಉಗ್ರ ಸಂಘಟನೆಯು ಅಂದಿನಿಂದಲೂ ಅಲ್ಲಿ ಮಹಿಳೆಯರ ಮೇಲೆ ಹಲವು ನಿರ್ಬಂಧಗಳನ್ನು ಹೇರಿದ್ದು, ಹೆಣ್ಣುಮಕ್ಕಳು 6ನೇ ತರಗತಿಯ ಬಳಿಕ ಶಿಕ್ಷಣ ಪಡೆಯಲು ಅವಕಾಶ ನೀಡಿಲ್ಲ.
ಇದೀಗ ಅಫ್ಘಾನಿಸ್ತಾನದಲ್ಲಿ ನೂತನ ಶೈಕ್ಷಣಿಕ ವರ್ಷ ಆರಂಭವಾದ ಬೆನ್ನಲ್ಲೇ ವಿಶ್ವಸಂಸ್ಥೆಯ ಮಕ್ಕಳ ನಿಧಿ(ಯುನಿಸೆಫ್) ತಾಲಿಬಾನ್‌ಗೆ ಈ ಬಗ್ಗೆ ಒತ್ತಾಯಿಸಿದೆ.
2021ರಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ನಿರ್ಬಂಧ ಹೇರಿದ ಸಂದರ್ಭ 4 ಲಕ್ಷಕ್ಕೂ ಹೆಚ್ಚು ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾದರು. ಆ ಸಂಖ್ಯೆ ಪ್ರಸ್ತುತ 22 ಲಕ್ಷಕ್ಕೆ ಏರಿಕೆಯಾಗಿದೆ ಎಂದು ಯುನಿಸೆಫ್ ಮಾಹಿತಿ ನೀಡಿದೆ. ಷರಿಯಾ ಕಾನೂನಿನ ಪ್ರಕಾರ ಹೆಣ್ಣುಮಕ್ಕಳು ಶಿಕ್ಷಣ ಪಡೆಯುವಂತಿಲ್ಲ ಎಂಬುದು ತಾಲಿಬಾನ್ ವಾದ.