ನವದೆಹಲಿ: 'ತೀರಾ ಗಂಭೀರವಲ್ಲದ ಪ್ರಕರಣಗಳಲ್ಲಿ' ತನಿಖೆ ಪೂರ್ಣಗೊಂಡಿದ್ದರೂ ವಿಚಾರಣಾ ನ್ಯಾಯಾಲಯಗಳು ಜಾಮೀನು ಅರ್ಜಿಗಳನ್ನು ತಿರಸ್ಕರಿಸಿರುವುದರ ಬಗ್ಗೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಪ್ರಜಾಪ್ರಭುತ್ವ ವ್ಯವಸ್ಥೆ ಇರುವ ನಾಡು ಪೊಲೀಸ್ ರಾಜ್ಯದಂತೆ ವರ್ತಿಸಬಾರದು ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್.ಓಕ ಮತ್ತು ಉಜ್ವಲ್ ಭೂಯಾನ್ ಅವರು ಇರುವ ವಿಭಾಗೀಯ ಪೀಠವು ಹೇಳಿದೆ. ಎರಡು ದಶಕಗಳ ಹಿಂದೆ ಸಣ್ಣ ಪ್ರಕರಣಗಳಲ್ಲಿ ಜಾಮೀನು ಅರ್ಜಿಗಳು ಹೈಕೋರ್ಟ್ ಹಂತಕ್ಕೆ ಬರುತ್ತಿದ್ದುದೂ ಅಪರೂಪವಾಗಿತ್ತು ಎಂದು ಪೀಠ ಹೇಳಿದೆ.
'ವಿಚಾರಣಾ ನ್ಯಾಯಾಲಯದ ಹಂತದಲ್ಲಿ ಇತ್ಯರ್ಥ ಆಗಬೇಕಿದ್ದ ಜಾಮೀನು ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಇತ್ಯರ್ಥಪಡಿಸುತ್ತಿರುವುದು ಆಘಾತಕಾರಿ. ವ್ಯವಸ್ಥೆಯ ಮೇಲೆ ಅನಗತ್ಯವಾಗಿ ಹೊರೆ ಹಾಕಲಾಗುತ್ತಿದೆ' ಎಂದು ನ್ಯಾಯಮೂರ್ತಿ ಓಕ ಅವರು ಜಾಮೀನು ಅರ್ಜಿಯೊಂದರ ವಿಚಾರಣೆ ಸಂದರ್ಭದಲ್ಲಿ ಹೇಳಿದರು.
ಈ ವಿಚಾರವಾಗಿ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸುತ್ತಿರುವುದು ಇದೇ ಮೊದಲಲ್ಲ. ಸಣ್ಣ ಪ್ರಮಾಣದ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದ ಜಾಮೀನು ಅರ್ಜಿಗಳ ವಿಚಾರಣೆ ಸಂದರ್ಭದಲ್ಲಿ ಹೆಚ್ಚು ಉದಾರವಾದ ನಿಲುವನ್ನು ತಾಳುವಂತೆ ವಿಚಾರಣಾ ನ್ಯಾಯಾಲಯಗಳಿಗೆ ಹಾಗೂ ಹೈಕೋರ್ಟ್‌ಗಳಿಗೆ ಅದು ಮತ್ತೆ ಮತ್ತೆ ಸೂಚಿಸಿದೆ.
ಆರೋಪಿಯನ್ನು ಬಂಧನದಲ್ಲಿ ಇರಿಸಿಕೊಳ್ಳುವ ಅಗತ್ಯ ಇಲ್ಲದಿದ್ದಾಗ ವ್ಯಕ್ತಿಯ ಸ್ವಾತಂತ್ರ್ಯವನ್ನು ರಕ್ಷಿಸುವುದರ ಮಹತ್ವದ ಬಗ್ಗೆ ಹಲವು ಬಾರಿ ನಿರ್ದೇಶನ ನೀಡಿದ್ದರೂ ಅಧೀನ ನ್ಯಾಯಾಲಯಗಳು ಜಾಮೀನು ನಿರಾಕರಿಸುವುದನ್ನು ಸುಪ್ರೀಂ ಕೋರ್ಟ್ ಈ ಹಿಂದೆ 'ಬೌದ್ಧಿಕ ಅಪ್ರಾಮಾಣಿಕತೆ' ಎಂದು ಹೇಳಿತ್ತು.
ವಂಚನೆ ಪ್ರಕರಣವೊಂದರಲ್ಲಿ ಎರಡು ವರ್ಷಕ್ಕೂ ಹೆಚ್ಚಿನ ಅವಧಿಯಿಂದ ಜೈಲಿನಲ್ಲಿ ಇದ್ದ ಆರೋಪಿಯೊಬ್ಬನಿಗೆ ಪೀಠವು ಜಾಮೀನು ನೀಡಿದೆ. ವಿಚಾರಣೆ ಪೂರ್ಣಗೊಂಡು, ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದ್ದರೂ ವಿಚಾರಣಾ ನ್ಯಾಯಾಲಯ ಹಾಗೂ ಗುಜರಾತ್ ಹೈಕೋರ್ಟ್ ಆರೋಪಿಯ ಜಾಮೀನು ಅರ್ಜಿ ತಿರಸ್ಕರಿಸಿದ್ದವು.
'ಮ್ಯಾಜಿಸ್ಟ್ರೇಟರು ತೀರ್ಮಾನಿಸಬೇಕಾದ ಜಾಮೀನು ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ಗೆ ತರುತ್ತಿರುವುದು ದುರದೃಷ್ಟಕರ. ಸಿಗಬೇಕಿರುವ ಸಂದರ್ಭದಲ್ಲಿ ಜನರಿಗೆ ಜಾಮೀನು ಸಿಗುತ್ತಿಲ್ಲ ಎಂಬುದು ಖೇದಕರ' ಎಂದು ನ್ಯಾಯಮೂರ್ತಿ ಓಕ ಹೇಳಿದರು.