ನವದೆಹಲಿ: ಸದನ ಕಲಾಪದ ಫೋಟೊವನ್ನು 'ಎಕ್ಸ್'ನಲ್ಲಿ ಹಂಚಿಕೊಂಡಿದ್ದ ಎಎಪಿ ಶಾಸಕ ಜರನೈಲ್ ಸಿಂಗ್ ಅವರಿಗೆ, ದೆಹಲಿ ವಿಧಾನಸಭೆ ಸ್ಪೀಕರ್ ವಿಜೇಂದರ್ ಗುಪ್ತಾ ಅವರು ಹಕ್ಕುಚ್ಯುತಿ ಮಂಡಿಸುವ ಎಚ್ಚರಿಕೆ ನೀಡಿದರು. ಜಾಲತಾಣದಿಂದ ಫೋಟೊವನ್ನು ತೆಗೆದುಹಾಕುವಂತೆ ತಾಕೀತು ಮಾಡಿದರು.
ಜಾಲತಾಣದಲ್ಲಿ ಕಲಾಪದ ಫೋಟೊ ಹಂಚಿಕೊಂಡಿದ್ದ ತಿಲಕ್ ನಗರ ಕ್ಷೇತ್ರದ ಶಾಸಕ ಜರನೈಲ್ ಸಿಂಗ್, 'ದೆಹಲಿ ವಿಧಾನಸಭೆಯಲ್ಲಿ ಇದೇ ಮೊದಲ ಬಾರಿಗೆ ಸಚಿವರ ಉಪಸ್ಥಿತಿ ಇಲ್ಲದೆ ಕಲಾಪ ನಡೆಯುತ್ತಿದೆ. ಸರ್ಕಾರದ ಪರವಾಗಿ ಉತ್ತರಿಸುವವರು ಯಾರು?' ಎಂದು ಹೇಳಿದ್ದರು.
ಬಿಜೆಪಿ ನಾಯಕರು ವಿಧಾನಸಭೆಯಲ್ಲಿ ವಿಷಯವನ್ನು ಪ್ರಸ್ತಾಪಿಸಿ, ಜರನೈಲ್ ಸಿಂಗ್ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಪೀಕರ್ ಅವರನ್ನು ಒತ್ತಾಯಿಸಿದರು.
ಈ ವೇಳೆ ಸಿಂಗ್, 'ವಿಧಾನಸಭೆ ಅಧಿವೇಶನದ ವಿಡಿಯೊಗಳನ್ನು ಜಾಲತಾಣದಲ್ಲಿ ಹಂಚಿಕೊಳ್ಳಬಹುದು ಎಂದಾದರೆ, ಕಲಾಪದ ಫೋಟೊವನ್ನು ಏಕೆ ಪೋಸ್ಟ್ ಮಾಡಬಾರದು' ಎಂದು ಸಮರ್ಥಿಸಿಕೊಂಡರು.
ನಂತರ ಸ್ಪೀಕರ್ ಅವರು ನಿಯಮಗಳನ್ನು ಉಲ್ಲೇಖಿಸಿ, ತಮ್ಮ ಅನುಮತಿಯ ಮೇರೆಗೆ ಅಧಿವೇಶನದ ವಿಡಿಯೊಗಳನ್ನು ನೇರ ಪ್ರಸಾರ ಮಾಡಲಾಗುತ್ತದೆ. ಆದರೆ ಸಿಂಗ್, ಯಾವುದೇ ಅನುಮತಿ ಇಲ್ಲದೆ ಕಲಾಪದ ಫೋಟೊವನ್ನು ಹಂಚಿಕೊಂಡಿದ್ದಾರೆ. ಹೀಗಾಗಿ ಕ್ಷಮೆಯಾಚಿಸಬೇಕು ಎಂದು ಹೇಳಿದರು.
ನಂತರ ಸಿಂಗ್ ಅವರು ತಮ್ಮ ನಡೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಆದರೆ ಜಾಲತಾಣದಿಂದ ತಕ್ಷಣವೇ ಫೋಟೊವನ್ನು ಅಳಿಸಿರಲಿಲ್ಲ. ಇದಕ್ಕೆ ಬಿಜೆಪಿ ಶಾಸಕರು ಆಕ್ಷೇಪ ವ್ಯಕ್ತಪಡಿಸಿದರು. ಬಳಿಕ ಸ್ಪೀಕರ್ ಹಕ್ಕುಚ್ಯುತಿ ಮಂಡಿಸುವ ಎಚ್ಚರಿಕೆ ನೀಡಿದರು. ನಂತರ ಸಿಂಗ್ ಫೋಟೊವನ್ನು ಜಾಲತಾಣದಿಂದ ಅಳಿಸಿಹಾಕಿದರು.