ನವದೆಹಲಿ: ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ (ಎನ್‌ಇಪಿ) ಪ್ರಸ್ತಾವ ಆಗಿರುವ ತ್ರಿಭಾಷಾ ಸೂತ್ರವನ್ನು ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಬೆಂಬಲಿಸಿದ್ದಾರೆ.
ತಮ್ಮ ವೈಯಕ್ತಿಕ ಉದಾಹರಣೆಯನ್ನು ನೀಡಿದ ಸುಧಾ ಅವರು, ಬೇರೆ ಬೇರೆ ಭಾಷೆಗಳನ್ನು ಕಲಿಯುವುದರಿಂದ ಸಿಗುವ ಪ್ರಯೋಜನಗಳನ್ನು ಹೇಳಿದರು.
'ನಾವು ಹಲವು ಭಾಷೆಗಳನ್ನು ಕಲಿಯಬಹುದು ಎಂಬುದು ನನ್ನ ನಂಬಿಕೆ. ನನಗೆ 7-8 ಭಾಷೆಗಳು ಗೊತ್ತಿವೆ. ನನಗೆ ಕಲಿಕೆ ಇಷ್ಟ. ಮಕ್ಕಳು ಬಹಳಷ್ಟು ಕಲಿಯಬಹುದು' ಎಂದು ಅವರು ಹೇಳಿದ್ದಾರೆ.
ಎನ್‌ಇಪಿ ವಿಚಾರದಲ್ಲಿ ತಮ್ಮ ನಿಲುವನ್ನು ಸಮರ್ಥಿಸಿಕೊಂಡ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಸುಧಾ ಅವರೊಂದಿಗಿನ ಮಾತುಕತೆಯನ್ನು ಸಂಸತ್ತಿನಲ್ಲಿ ಉಲ್ಲೇಖಿಸಿದರು.
'ಎಷ್ಟು ಭಾಷೆ ಬರುತ್ತದೆ ಎಂದು ಸುಧಾ ಅವರಲ್ಲಿ ನಾನು ಕೇಳಿದೆ. ಹುಟ್ಟಿನಿಂದ ತಾವು ಕನ್ನಡಿಗರೆಂದು, ವೃತ್ತಿಯ ಕಾರಣಕ್ಕೆ ಇಂಗ್ಲಿಷ್ ಕಲಿತಿದ್ದಾಗಿ, ಅಭ್ಯಾಸದ ಮೂಲಕ ಸಂಸ್ಕೃತ, ಹಿಂದಿ, ಒಡಿಯಾ, ತೆಲುಗು ಮತ್ತು ಮರಾಠಿ ಕಲಿತಿರುವುದಾಗಿ ಹೇಳಿದರು... ಇಷ್ಟು ಭಾಷೆ ಕಲಿಯುವಂತೆ ಸುಧಾ ಅವರಿಗೆ ಯಾರು ಒತ್ತಡ ಹೇರಿದ್ದರು? ಯಾರೂ ಯಾರ ಮೇಲೂ ಏನನ್ನೂ ಹೇರುತ್ತಿಲ್ಲ...' ಎಂದು ಪ್ರಧಾನ್ ಹೇಳಿದ್ದಾರೆ.