ನವದೆಹಲಿ: 'ಹಸಿರು ಉಳಿಸಬೇಕೆಂದರೆ ಮರಗಣತಿಯನ್ನು ನಡೆಸುವುದು ಅತ್ಯಗತ್ಯ. ಇದರಿಂದ ಉತ್ತರ ಪ್ರದೇಶ ಮರಗಳ ಸಂರಕ್ಷಣಾ ಕಾಯ್ದೆ 1976 ಅನ್ನು ಸಮರ್ಪಕವಾಗಿ ಜಾರಿಗೊಳಿಸಲು ಅನುಕೂಲವಾಗಲಿದೆ' ಎಂದು ಸುಪ್ರೀಂ ಕೋರ್ಟ್ ಬುಧವಾರ ಅಭಿಪ್ರಾಯಪಟ್ಟಿದೆ.
ಉತ್ತರ ಪ್ರದೇಶದ ಆಗ್ರ, ಫಿರೋಜಾಬಾದ್, ಮಥುರಾ, ಹಾಥರಸ್, ಇಥಾ ಜಿಲ್ಲೆಗಳು ಹಾಗೂ ರಾಜಸ್ಥಾನದ ಭರತ್‌ಪುರ ಜಿಲ್ಲೆಯ ವ್ಯಾಪ್ತಿ ಹೊಂದಿರುವ ತಾಜ್ ಟ್ರಪೀಝಿಯಂ, ಒಟ್ಟು 10,400 ಚದರ ಕಿಲೋ ಮೀಟರ್‌ನಷ್ಟು ಅರಣ್ಯ ವಲಯ ಹೊಂದಿದೆ.ಇಲ್ಲಿ ಅಕ್ರಮವಾಗಿ ಮರಗಳನ್ನು ಕಡಿಯಲಾಗುತ್ತಿದೆ ಎಂಬ ದೂರು ಕುರಿತ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮರ ಗಣತಿಗೆ ಆದೇಶಿಸಿದೆ.
ಇಲ್ಲಿ 1976ರ ಕಾಯ್ದೆ ಉಲ್ಲಂಘನೆ ಕುರಿತು ಸಲ್ಲಿಕೆಯಾದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಅಭಯ್ ಎಸ್. ಒಕಾ ಹಾಗೂ ನ್ಯಾ. ಕೋಟೀಶ್ವರ ಅವರಿದ್ದ ಪೀಠವು ಮರ ಗಣತಿಗೆ ಡೆಹ್ರಾಡೂನ್‌ನಲ್ಲಿರುವ ಅರಣ್ಯ ಸಂಶೋಧನಾ ಸಂಸ್ಥೆಯನ್ನು ನೇಮಿಸುವಂತೆ ನಿರ್ದೇಶಿಸಿದೆ.
'ತಾಜ್ ಟ್ರಪೀಝಿಯಂನಲ್ಲಿ ಅಕ್ರಮವಾಗಿ ಮರಗಳನ್ನು ಕಡಿಯುವುದನ್ನು ತಡೆಯಲು ಮರಗಳ ಸಂಖ್ಯೆಯನ್ನು ಪರಿಗಣಿಸಬೇಕಾದ್ದು ಅತ್ಯಗತ್ಯ. ಅದಕ್ಕಾಗಿ ಮರಗಣತಿ ನಡೆಸಬೇಕು. ಇದರಿಂದ ಇರುವ ಮರಗಳ ಮೇಲೆ ನಿಗಾ ಇಡಲು ಸಾಧ್ಯ' ಎಂದು ಪೀಠ ಹೇಳಿತು.
ಮರಗಳ ಸಂರಕ್ಷಣೆಯ ಜತೆಗೆ, ಈ ಪ್ರದೇಶದಲ್ಲಿರುವ ಯುನೆಸ್ಕೊ ವಿಶ್ವ ಪಾರಂಪರಿಕ ತಾಣವಾದ ತಾಜ್ ಮಹಲ್ ಸಹಿತ ಐತಿಹಾಸಿಕ ಸ್ಮಾರಕಗಳ ರಕ್ಷಣೆಯ ಕುರಿತೂ ಅರ್ಜಿಯಲ್ಲಿ ಮನವಿ ಮಾಡಿಕೊಳ್ಳಲಾಗಿತ್ತು.
ಇದೇ ವಿಷಯವಾಗಿ ಸಲ್ಲಿಕೆಯಾದ ಮತ್ತೊಂದು ಅರ್ಜಿಯ ವಿಚಾರಣೆಯನ್ನು ಅ. 14ರಂದು ನಡೆಸಿದ್ದ ಸುಪ್ರೀಂ ಕೋರ್ಟ್, ಸಂಪೂರ್ಣ ಅರಣ್ಯೀಕರಣಗೊಳಿಸುವ ತನ್ನ ಆದೇಶವನ್ನು ಅಧಿಕಾರಿಗಳು ಪಾಲಿಸದಿದ್ದಲ್ಲಿ ಈ ವಲಯದಲ್ಲಿನ ಹೆದ್ದಾರಿ ಹಾಗೂ ಇತರ ನಿರ್ಮಾಣಗಳನ್ನು ನೆಲಸಮಗೊಳಿಸಿ, ಪುನರ್ ನಿರ್ಮಾಣ ಮಾಡುವಂತೆ ಆದೇಶಿಸಲಾಗುವುದು ಎಂದು ಎಚ್ಚರಿಸಿತ್ತು.