ಇಟಲಿ: ಜಗತ್ತಿನಲ್ಲೇ ಮೊದಲ ಬಾರಿಗೆ ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆಯಿಂದ(ಎಐ) ರೂಪಿಸಲಾದ ಸಂಚಿಕೆಯನ್ನು ಮಂಗಳವಾರ ಪ್ರಕಟಿಸಿರುವುದಾಗಿ ಇಟಲಿಯ ಎಲ್ ಫೋಗ್‌ಲಿಯೋ ಹೇಳಿಕೊಂಡಿದೆ.
ಎಐ ಹೇಗೆ ನಮ್ಮ ಕೆಲಸದ ಮೇಲೆ ಪರಿಣಾಮ ಬೀರಬಹುದು ಎಂಬ ಪ್ರಯೋಗಾರ್ಥವಾಗಿ ಸಂಚಿಕೆ ರೂಪಿಸಲಾಗಿದೆ ಎಂದು ಪತ್ರಿಕೆ ಸಂಪಾದಕ ಕ್ಲಾಡಿಯೊ ಸೆರಾಸಾ ತಿಳಿಸಿದ್ದಾರೆ.
ವರದಿಗಾರಿಕೆ, ಶೀರ್ಷಿಕೆ, ಕೋಟ್‌ಗಳು, ಸಾರಾಂಶ ಸೇರಿ ಎಲ್ಲದಕ್ಕೂ ಎಐ ಬಳಕೆಯಾಗಿದೆ. ಎಐ ಟೂಲ್‌ಗಳಲ್ಲಿ ಪ್ರಶ್ನೆಗಳನ್ನು ಕೇಳುವುದು ಮತ್ತು ಉತ್ತರಗಳನ್ನು ಓದುವುದಕ್ಕಷ್ಟೇ ಪತ್ರಕರ್ತರ ಪಾತ್ರ ಸೀಮಿತವಾಗಿತ್ತು ಎಂದಿದ್ದಾರೆ.
ಪ್ರಕಟವಾದ ಯಾವುದೇ ಲೇಖನಗಳಲ್ಲಿ ಮಾನವರ ಹೇಳಿಕೆಯನ್ನು ಕೋಟ್ ಮಾಡಲಾಗಿಲ್ಲ ಎಂಬುದು ವಿಶೇಷವಾಗಿದೆ. 4 ಪುಟಗಳ ಎಲ್ ಫೋಗ್‌ಲಿಯೋ ಸಂಪೂರ್ಣವಾಗಿ ಎಐನಿಂದ ರೂಪಿಸಿರುವ ಪ್ರಯೋಗವು ಮುಂಬರುವ ದಿನಗಳಲ್ಲಿ ಪತ್ರಿಕೋದ್ಯಮದಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆಯ ಸಾಧ್ಯತೆಗಳನ್ನು ತೆರದಿಟ್ಟಿದೆ.