ಪಂಜಾಬ್: ಪಂಜಾಬ್ ಪೊಲೀಸರು ಸ್ವಯಂ ಘೋಷಿತ ಪಾದ್ರಿ ಬಜಿಂದರ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ ವಾರಗಳ ನಂತರ, ಆತ ತನ್ನ ಕಚೇರಿಯಲ್ಲಿ ಪುರುಷ ಮತ್ತು ಮಹಿಳೆಯ ಮೇಲೆ ಹಲ್ಲೆ ನಡೆಸುತ್ತಿರುವ ಮನಕಲಕುವ ವೀಡಿಯೊ ವೈರಲ್ ಆಗತೊಡಗಿದೆ.
ಜಲಂಧರ್ ಮೂಲದ ಸಿಂಗ್ 'ದಿ ಚರ್ಚ್ ಆಫ್ ಗ್ಲೋರಿ& ವಿಸ್ಡಮ್' ನ್ನು ಮುನ್ನಡೆಸುತ್ತಿದ್ದಾರೆ ಮತ್ತು ತಮ್ಮನ್ನು "ಪ್ರವಾದಿ ಬಜಿಂದರ್" ಎಂದು ಕರೆದುಕೊಳ್ಳುತ್ತಾರೆ.
ಕಳೆದ ತಿಂಗಳಿನ ಸಿಸಿಟಿವಿ ದೃಶ್ಯಾವಳಿಗಳು ಈಗ ವೈರಲ್ ಆಗಿದ್ದು, ಸಿಂಗ್ ತಮ್ಮ ಕಚೇರಿಯಲ್ಲಿ ವಸ್ತುಗಳನ್ನು ಎಸೆದು ಜನರನ್ನು ಕಪಾಳಮೋಕ್ಷ ಮಾಡುತ್ತಿರುವುದನ್ನು ತೋರಿಸುತ್ತವೆ. ಕೆಲವು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಸಿಂಗ್ ಅವರ ಸಿಬ್ಬಂದಿಯ ಭಾಗವೆಂದು ಹೇಳಿಕೊಳ್ಳುತ್ತವೆ. ಮೊದಲಿಗೆ, ಅವರು ಪದೇ ಪದೇ ಒಬ್ಬ ವ್ಯಕ್ತಿಯನ್ನು ಕಪಾಳಮೋಕ್ಷ ಮಾಡುತ್ತಾರೆ. ನಂತರ ಅವರು ಒಬ್ಬ ಮಹಿಳೆಯೊಂದಿಗೆ ಜಗಳವಾಡಲು ಪ್ರಾರಂಭಿಸುತ್ತಾರೆ ಮತ್ತು ತುಂಬಾ ಉದ್ರೇಕಗೊಂಡಂತೆ ಕಾಣುತ್ತಾರೆ. ಇದ್ದಕ್ಕಿದ್ದಂತೆ, ಅವರು ಪುಸ್ತಕದಂತೆ ಕಾಣುವದನ್ನು ಅವಳ ಮೇಲೆ ಎಸೆಯುತ್ತಾರೆ. ಆಕೆ ಆತನನ್ನು ಎದುರಿಸಿದಾಗ, ಸಿಂಗ್ ಕಪಾಳಮೋಕ್ಷ ಮಾಡುತ್ತಾನೆಈ ವೇಳೆ ಕೋಣೆಯಲ್ಲಿರುವ ಇತರರು ಮಧ್ಯಪ್ರವೇಶಿಸಿ ಅವನನ್ನು ತಡೆಯಲು ಪ್ರಯತ್ನಿಸುತ್ತಾರೆ.
ಇದಕ್ಕೂ ಮೊದಲು, ಸ್ವಯಂ ಘೋಷಿತ ದೇವಮಾನವ ತನಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದರು. 2017 ರಲ್ಲಿ ಸಿಂಗ್ ಅವರ ಚರ್ಚ್‌ಗೆ ಸೇರಿದ್ದ ಆ ಮಹಿಳೆ 2023 ರಲ್ಲಿ ಅಲ್ಲಿಂದ ಹೊರಟುಹೋದರು ಎಂದು ತಿಳಿದುಬಂದಿದೆ. 2022 ರಲ್ಲಿ, ನನ್ನನ್ನು ಅನುಚಿತವಾಗಿ ಸ್ಪರ್ಶಿಸಿದ್ದಾರೆ ಎಂದು ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
"ನಾನು ಕಾಲೇಜಿಗೆ ಹೋದಾಗ ಅವರು ನನ್ನ ಹಿಂದೆ ಕಾರುಗಳನ್ನು ಕಳುಹಿಸುತ್ತಿದ್ದರು, ಅದು ಮನೆಯವರೆಗೂ ನನ್ನನ್ನು ಹಿಂಬಾಲಿಸುತ್ತಿತ್ತು. ನನ್ನ ತಂದೆ ಎಂದಿಗೂ ಮನೆಗೆ ಹಿಂತಿರುಗಬಾರದು ಮತ್ತು ನನ್ನ ತಾಯಿ ಚರ್ಚ್ ನಿಂದ ಜೀವಂತವಾಗಿ ಹೊರಬರಬಾರದು ಎಂದು ಬಯಸುತ್ತೀಯಾ? ಎಂದು ಅವರು ನನಗೆ ಬೆದರಿಕೆ ಹಾಕಿದ್ದರು. ನಾನು ಖಿನ್ನತೆಗೆ ಒಳಗಾಗಿದ್ದೆ ಮತ್ತು ಆ ಕಷ್ಟವನ್ನು ಯಾರೊಂದಿಗೂ ಹಂಚಿಕೊಳ್ಳಲು ಸಾಧ್ಯವಾಗಲಿಲ್ಲ" ಎಂದು ಮಹಿಳೆ ಮೊಹಾಲಿಯಲ್ಲಿ ವರದಿಗಾರರಿಗೆ ತಿಳಿಸಿದ್ದಾರೆ. ಸಿಂಗ್ ಅಫೀಮು ವ್ಯಾಪಾರ ಮತ್ತು ಮಹಿಳೆಯರ ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. "ಅವರು ಮಹಿಳೆಯರೊಂದಿಗೆ ತಪ್ಪು ಕೃತ್ಯಗಳನ್ನು ಎಸಗುತ್ತಾರೆ ಮತ್ತು ಮಾತನಾಡುವವರನ್ನು ಕೊಲ್ಲಲಾಗುತ್ತದೆ ಅಥವಾ ಬೆದರಿಸಲಾಗುತ್ತದೆ" ಎಂದು ಅವರು ಆರೋಪಿಸಿದ್ದಾರೆ.