ಕೈರೊ: ಹಮಾಸ್ ಬಂಡುಕೋರರ ವಿರುದ್ಧ ಪ್ಯಾಲೆಸ್ಟೀನಿಯನ್ನರ ಆಕ್ರೋಶ ಸ್ಫೋಟಗೊಂಡಿದ್ದು, ಅವರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಅಪರೂಪವೆಂಬಂತೆ, ಹಮಾಸ್ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟಿಸಿರುವ ಪ್ಯಾಲೆಸ್ಟೀನಿಯನ್ನರು, ಯುದ್ಧವನ್ನು ಕೊನೆಗೊಳಿಸುವಂತೆ ಆಗ್ರಹಿಸಿದ್ದಾರೆ.
ಪ್ರತಿಭಟನೆ ಕುರಿತ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.
ಹಮಾಸ್ ಹಾಗೂ ಇಸ್ರೇಲ್ ನಡುವೆ ಯುದ್ಧ ಆರಂಭಗೊಂಡು 17 ತಿಂಗಳು ಗತಿಸಿದ್ದು, ಅಪಾರ ಸಾವು-ನೋವು ಸಂಭವಿಸಿವೆ. ಆದರೆ, ಈಗ ಹಮಾಸ್ ವಿರುದ್ಧವೇ ಪ್ಯಾಲೆಸ್ಟೀನಿಯನ್ನರು ಆಕ್ರೋಶ ಹೊರಹಾಕಿದ್ದಾರೆ.
ಗಾಜಾ ಪಟ್ಟಿಯ ಬೀಟ್ ಲಹಿಯಾ ನಗರದಲ್ಲಿ ಮಂಗಳವಾರ ನಡೆದ ಯುದ್ಧ ವಿರೋಧಿ ಪ್ರತಿಭಟನೆಯಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು. 'ಯುದ್ಧ ನಿಲ್ಲಿಸಿ', 'ನಾವು ಸಾಯಲು ಇಚ್ಛಿಸುವುದಿಲ್ಲ', 'ನಮ್ಮ ಮಕ್ಕಳ ರಕ್ತ ಅಗ್ಗವಲ್ಲ' ಎಂಬ ಬರಹಗಳಿರುವ ಭಿತ್ತಿಪತ್ರಗಳನ್ನು ಪ್ರತಿಭಟನಕಾರರು ಪ್ರದರ್ಶಿಸಿದರು.
ಕೆಲ ಪ್ರತಿಭಟನಕಾರರು 'ಹಮಾಸ್ ತೊಲಗಲಿ' ಎಂಬ ಘೋಷಣೆಗಳನ್ನು ಕೂಗುತ್ತಿರುವುದು ಹಾಗೂ ಹಮಾಸ್ ಬೆಂಬಲಿಗರು ಪ್ರತಿಭಟನಕಾರರನ್ನು ಚದುರಿಸುತ್ತಿರುವ ದೃಶ್ಯಗಳು ಸಹ ವಿಡಿಯೊದಲ್ಲಿವೆ.