ಕಠ್ಮಂಡು: ನೇಪಾಳದಲ್ಲಿ ರಾಜಪ್ರಭುತ್ವವನ್ನು ಮರು ಸ್ಥಾಪಿಸಿ, ಹಿಂದೂ ರಾಷ್ಟ್ರವಾಗಿ ಘೋಷಿಸಬೇಕು ಎಂದು ಒತ್ತಾಯಿಸಿ ಕಠ್ಮುಂಡುವಿನಲ್ಲಿ ಶುಕ್ರವಾರ ನಡೆದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ ಕಾರಣ ಹೇರಲಾಗಿದ್ದ ಕರ್ಫ್ಯೂವನ್ನು ಇಲ್ಲಿನ ಸರ್ಕಾರ ಶನಿವಾರ ಹಿಂಪಡೆದಿದೆ.
ಶುಕ್ರವಾರ ಪ್ರತಿಭಟನೆಗಿಳಿದ ರಾಜಪ್ರಭುತ್ವದ ಬೆಂಬಲಿಗರು, ರಾಜಧಾನಿ ಕಠ್ಮುಂಡು ವ್ಯಾಪ್ತಿಯ ಟಿಂಕುಣೆ ಎಂಬಲ್ಲಿರುವ ಸರ್ಕಾರಿ ಕಚೇರಿಗಳ ಮೇಲೆ ಕಲ್ಲು ತೂರಾಟ ನಡೆಸಿದರು. ರಾಜಕೀಯ ಕಚೇರಿಗಳ ಮೇಲೆ ದಾಳಿ ನಡೆಸಿ, ಅಂಗಡಿಗಳನ್ನು ಲೂಟಿ ಮಾಡಿದರು. ಈ ಹಿಂಸಾಚಾರದಲ್ಲಿ 14 ಕಟ್ಟಡಗಳು, ಸರ್ಕಾರದ 9 ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು. 6 ಖಾಸಗಿ ವಾಹನಗಳನ್ನು ಧ್ವಂಸ ಮಾಡಲಾಗಿತ್ತು.
ಈ ಘಟನೆಯಲ್ಲಿ ಟಿ.ವಿ ಕ್ಯಾಮೆರಾಮನ್ ಸೇರಿದಂತೆ ಇಬ್ಬರು ಮೃತಪಟ್ಟಿದ್ದರು. 110 ಮಂದಿ ಗಾಯಗೊಂಡಿದ್ದರು. ಈ ಪೈಕಿ 53 ಪೊಲೀಸ್ ಸಿಬ್ಬಂದಿ, 22 ಶಸ್ತ್ರಸಜ್ಜಿತ ಪೊಲೀಸ್ ಸಿಬ್ಬಂದಿ ಹಾಗೂ 35 ಪ್ರತಿಭಟನಕಾರರಾಗಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಸೇನೆಯನ್ನು ನಿಯೋಜಿಸಲಾಯಿತು ಎಂದು ಅಧಿಕಾರಿಯೊಬ್ಬರು ಹೇಳಿದರು.
ಹಿಂಸಾಚಾರ ಕೃತ್ಯಗಳಲ್ಲಿ ಭಾಗಿಯಾದ 105 ಪ್ರತಿಭಟನಕಾರರನ್ನು ಬಂಧಿಸಲಾಗಿದೆ. ಗಲಭೆ ನಿಯಂತ್ರಣಕ್ಕೆ ಶುಕ್ರವಾರ ಸಂಜೆ 4.25ಕ್ಕೆ ಹೇರಲಾಗಿದ್ದ ಕರ್ಫ್ಯೂ ಅನ್ನು ಪರಿಸ್ಥಿತಿ ಸುಧಾರಿಸಿದ ಕಾರಣ ಶನಿವಾರ ಬೆಳಿಗ್ಗೆ 7 ಗಂಟೆಗೆ ತೆರವು ಮಾಡಲಾಗಿದೆ ಎಂದು ಕಠ್ಮಂಡು ಜಿಲ್ಲಾ ಆಡಳಿತದ ಕಚೇರಿ ತಿಳಿಸಿದೆ.
2008ರಲ್ಲಿ ನೇಪಾಳದ ರಾಜಕೀಯ ಪಕ್ಷಗಳು ಸಂಸದೀಯ ವ್ಯವಸ್ಥೆಯನ್ನು ಘೋಷಿಸಿಕೊಂಡವು. ಆ ಮೂಲಕ 240 ವರ್ಷದಷ್ಟು ಹಳೆಯ ರಾಜಮನೆತನದ ವ್ಯವಸ್ಥೆಯನ್ನು ಕೊನೆಗೊಳಿಸಲಾಗಿತ್ತು.