ಇಂಫಾಲ್: ಮಣಿಪುರದ ಕಾಂಗ್‌ಪೊಕ್ಪಿ ಜಿಲ್ಲೆಯ ಥಿಂಗ್ಸಾಟ್ ಬೆಟ್ಟ ಹಾಗೂ ಇಂಫಾಲ್ ಪೂರ್ವ ಜಿಲ್ಲೆಗೆ ಹೊಂದಿಕೊಂಡಿರುವ ವಕಾನ್ ಬೆಟ್ಟದಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ಐದು ಬಂಕರ್‌ಗಳನ್ನು ಭದ್ರತಾ ಪಡೆಗಳು ನಾಶಪಡಿಸಿವೆ.
42 ಬಂದೂಕು ಪೊಲೀಸರ ವಶಕ್ಕೆ:
ಜನಾಂಗೀಯ ಕಲಹದಿಂದ ತತ್ತರಿಸಿರುವ ಮಣಿಪುರದ ಐದು ಜಿಲ್ಲೆಗಳಲ್ಲಿ ಸ್ಥಳೀಯರು ಈ ಹಿಂದೆ ಹೊತ್ತೊಯ್ದಿದ್ದ ಶಸ್ತ್ರಾಸ್ತ್ರಗಳಲ್ಲಿ ಕೆಲವನ್ನು ಮರಳಿಸಿದ್ದಾರೆ.
ಇಂಫಾಲ್ ಪಶ್ಚಿಮ ಮತ್ತು ಪೂರ್ವ, ಚುರಾಚಾಂದಪುರ, ಬಿಷ್ಣುಪುರ, ತಮೆಂಗ್‌ಲಾಂಗ್ ಜಿಲ್ಲೆಗಳಲ್ಲಿ 42 ಬಂದೂಕುಗಳು, ಮದ್ದುಗುಂಡುಗಳನ್ನು ಶನಿವಾರ ಮರಳಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ಬಿಷ್ಣುಪುರ ಜಿಲ್ಲೆಯಲ್ಲಿ ಎರಡು ಪಿಸ್ತೂಲ್, ಆರು ಗ್ರೆನೇಡ್, 75 ಕೋವಿಗುಂಡು, ಐದು ಬಂದೂಕು ಹಾಗೂ ತಮೆಂಗ್‌ಲಾಂಗ್ ಜಿಲ್ಲೆಯ ಕೈಮೈ ಪೊಲೀಸ್ ಠಾಣೆಗೆ ದೇಶಿ ನಿರ್ಮಿತ 17 ಬಂದೂಕು, ಒಂಬತ್ತು ಸಣ್ಣ ಫಿರಂಗಿ ಮತ್ತು ಕೋವಿಗುಂಡುಗಳನ್ನು ಒಪ್ಪಿಸಲಾಗಿದೆ.
ಚುರಾಚಾಂದಪುರ, ಪೊರೊಂಪಾಟ್, ಲಮ್‌ಸಂಗ್ ಪೊಲೀಸ್ ಠಾಣೆಗಳಿಗೆ ಕನಿಷ್ಠ 10 ಬಂದೂಕುಗಳು ಹಾಗೂ ಮದ್ದುಗುಂಡುಗಳನ್ನು ಒಪ್ಪಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.