ಲಖನೌ: ಪಾಕಿಸ್ತಾನದ ಉಗ್ರ ಸಂಘಟನೆ ಐಎಸ್‌ಐ ಜತೆ ನಂಟು ಹೊಂದಿರುವ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಷನಲ್ ಸಂಘಟನೆಯ ಉಗ್ರನನ್ನು ಪೊಲೀಸರು ಗುರುವಾರ ಮುಂಜಾನೆ ಬಂಧಿಸಿದ್ದಾರೆ.
ಉತ್ತರ ಪ್ರದೇಶ ಎಸ್‌ಟಿಎಫ್ ಮತ್ತು ಪಂಜಾಬ್ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಕೌಶಂಬಿ ಜಿಲ್ಲೆಯಲ್ಲಿ ಉಗ್ರನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶಂಕಿತ ಉಗ್ರನನ್ನು ಲಾಜರ್ ಮಸಿಹ್ ಎಂದು ಗುರುತಿಸಲಾಗಿದ್ದು, ಪಂಜಾಬ್‌ನ ಅಮೃತಸರದ ಕುರ್ಲಿಯನ್ ಗ್ರಾಮದ ನಿವಾಸಿಯಾಗಿದ್ದಾನೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಮಿತಾಬ್ ಯಶ್ ತಿಳಿಸಿದ್ದಾರೆ.
ಬಂಧಿತ ಉಗ್ರ, ಜರ್ಮನಿ ಮೂಲದ ಖಾಲ್ಸಾ ಇಂಟರ್‌ನ್ಯಾಷನಲ್ ಸಂಘಟನೆಯ ಮುಖ್ಯಸ್ಥ ಸ್ವರ್ಣ ಸಿಂಗ್ ಅಲಿಯಾಸ್ ಜೀವನ್ ಫೌಜಿ ಎನ್ನುವವನಿಗೆ ಕೆಲಸ ಮಾಡುತ್ತಿದ್ದ. ಜತೆಗೆ ಪಾಕಿಸ್ತಾನದ ಐಎಸ್‌ಐ ಕಾರ್ಯಕರ್ತರೊಂದಿಗೆ ನೇರ ಸಂಪರ್ಕದಲ್ಲಿದ್ದಾನೆ ಎಂದು ಮಾಹಿತಿ ಲಭ್ಯವಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬಂಧಿತ ಉಗ್ರನಿಂದ ಕೆಲವು ಸ್ಫೋಟಕಗಳು ಮತ್ತು ಅಕ್ರಮ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವುಗಳಲ್ಲಿ ಮೂರು ಸಕ್ರಿಯ ಹ್ಯಾಂಡ್ ಗ್ರೆನೇಡ್‌ಗಳು, ಎರಡು ಸಕ್ರಿಯ ಡಿಟೋನೇಟರ್‌ಗಳು, ಒಂದು ವಿದೇಶಿ ನಿರ್ಮಿತ ಪಿಸ್ತೂಲ್ ಮತ್ತು ವಿದೇಶಿ ನಿರ್ಮಿತ 13 ಕಾರ್ಟ್ರಿಡ್ಜ್‌ಗಳು ಸೇರಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಾಜಿಯಾಬಾದ್‌ನ ವಿಳಾಸವಿರುವ ಆಧಾರ್‌ಕಾರ್ಡ್, ಮೊಬೈಲ್ ಫೋನ್ ಮತ್ತು ಸಿಮ್ ಅನ್ನೂ ವಶಕ್ಕೆ ಪಡೆಯಲಾಗಿದೆ. ಈತ ನ್ಯಾಯಾಂಗ ಬಂಧನದ ಅವಧಿಯಲ್ಲಿ 2024ರ ಸೆಪ್ಟೆಂಬರ್ 24ರಂದು ಪಂಜಾಬ್‌ನಲ್ಲಿ ಜೈಲಿನಿಂದ ತಪ್ಪಿಸಿಕೊಂಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.