ನವದೆಹಲಿ: ಮತದಾರರ ನಕಲಿ ಗುರುತಿನ ಚೀಟಿಗಳಿಂದ ಹಿಡಿದು ಅಮೆರಿಕದ ನಿಧಿ ಮತ್ತು ಮತದಾನದ ಪ್ರಮಾಣವರೆಗಿನ ವಿಷಯಗಳ ಕುರಿತು ಚರ್ಚೆಗಾಗಿ ನೀಡಲಾದ ನೋಟಿಸ್‌ಗಳನ್ನು ತಿರಸ್ಕರಿಸಿದ ನಂತರ ಕಾಂಗ್ರೆಸ್ ನೇತೃತ್ವದಲ್ಲಿ ವಿರೋಧ ಪಕ್ಷಗಳು ಸೋಮವಾರ ರಾಜ್ಯಸಭೆಯಿಂದ ಹೊರನಡೆದವು.
ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರು ನಿಯಮಗಳ ಅಡಿಯಲ್ಲಿದ್ದರೆ ಯಾವುದೇ ವಿಷಯದ ಬಗ್ಗೆ ಚರ್ಚಿಸಲು ಸರ್ಕಾರ ಸಿದ್ಧವಾಗಿದೆ ಎಂದು ಹೇಳಿದರು.
ನಿಯಮ 267ರ ಅಡಿಯಲ್ಲಿ ಒಂದು ಡಜನ್ ನೋಟಿಸ್‌ಗಳನ್ನು ತಿರಸ್ಕರಿಸಲಾಗಿದೆ ಎಂದು ಸದನದ ಉಪ ಸಭಾಪತಿ ಹರಿವಂಶ್ ಹೇಳಿದ ನಂತರ ವಿರೋಧ ಪಕ್ಷದ ಸಂಸದರು ಘೋಷಣೆಗಳನ್ನುಕೂಗಿದರು.
ಇದನ್ನೇ ಉಲ್ಲೇಖಿಸಿ, ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೂ ತಮ್ಮ ಮನವಿ ಸಲ್ಲಿಕೆಗೆ ಉಪ ಸಭಾಪತಿ ಅವಕಾಶ ನೀಡಲಿಲ್ಲ. ನಂತರ ವಿರೋಧ ಪಕ್ಷದ ಸಂಸದರು ಸ್ವಲ್ಪ ಸಮಯದವರೆಗೆ ಪ್ರತಿಭಟನೆ ನಡೆಸಿ ಸಭಾತ್ಯಾಗ ನಡೆಸಿದರು.
ಸದನದ ನಾಯಕ ಮತ್ತು ಕೇಂದ್ರ ಸಚಿವ ನಡ್ಡಾ ಅವರು ಸಭಾತ್ಯಾಗವನ್ನು ಬೇಜವಾಬ್ದಾರಿಯುತ ವರ್ತನೆ ಎಂದು ಕರೆದಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಸೇರಿದಂತೆ ವಿರೋಧ ಪಕ್ಷಗಳ ಸಂಸದರು ಸದನದ ನಿಯಮಗಳ ಕುರಿತು ಪುನರ್ ಪರಿಶೀಲನೆಗೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಸಭಾಪತಿಯ ವಿಸ್ತೃತ ಆದೇಶದ ಹೊರತಾಗಿಯೂ ವಿರೋಧ ಪಕ್ಷಗಳ ಸಂಸದರು ನಿಯಮ 267ರ ಅಡಿಯಲ್ಲಿ ನೋಟಿಸ್ ನೀಡುವ ಅಭ್ಯಾಸ ಮಾಡಿಕೊಂಡಿದ್ದು, ಇದು ಸಂಸತ್ತಿನ ಸಂಸ್ಥೆಯನ್ನು ಕೀಳಾಗಿ ಕಾಣುವ ದುಷ್ಟ ಸಂಚು ಎಂದು ನಡ್ಡಾ ಕರೆದಿದ್ದಾರೆ..
ಅವರಿಗೆ ಚರ್ಚೆಯಲ್ಲಿ ಆಸಕ್ತಿ ಇಲ್ಲ. ಸರ್ಕಾರವು ಪ್ರಶ್ನೆಗಳಿಗೆ ಉತ್ತರಿಸುತ್ತಿಲ್ಲ ಅಥವಾ ಚರ್ಚೆಗೆ ಅವಕಾಶ ಕೊಡುತ್ತಿಲ್ಲ ಎಂಬ ಭಾವನೆ ಸೃಷ್ಟಿಸಲು ಅವರು ಬಯಸುತ್ತಾರೆ ಎಂದು ಕಿಡಿಕಾರಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಯಾವುದೇ ವಿಷಯವನ್ನು ಚರ್ಚಿಸಲು ಸಿದ್ಧವಾಗಿದೆ. ಆದರೆ, ಸದನದಲ್ಲಿ ಚರ್ಚೆಗಳಿಗೆ ನಿಯಮಗಳಿವೆ' ಎಂದು ನಡ್ಡಾ ಹೇಳಿದ್ದಾರೆ. ಮುಂದಿನ 10 ದಿನಗಳಲ್ಲಿ ಕೇಂದ್ರ ಬಜೆಟ್ ಮೇಲಿನ ಚರ್ಚೆಯ ಸಮಯದಲ್ಲಿ ಸಂಸದರು ತಮ್ಮ ಸಮಸ್ಯೆಗಳ ಬಗ್ಗೆ ಪ್ರಶ್ನೆ ಎತ್ತಲು ಅವಕಾಶವನ್ನು ಪಡೆಯುತ್ತಾರೆ. ಆ ಚರ್ಚೆಗೆ ನಾವು ಸಿದ್ಧರಿದ್ದೇವೆ. ಅಲ್ಪಾವಧಿಯ ಮತ್ತು ದೀರ್ಘಾವಧಿಯ ಚರ್ಚೆಗಳಿಗೆ ಅವಕಾಶವಿದೆ. ಆದರೆ, ವಿರೋಧ ಪಕ್ಷಗಳು ನಿಯಮಗಳನ್ನು ಓದುವುದಿಲ್ಲ. ವಿರೋಧ ಪಕ್ಷದ ಸಂಸದರು ಮೊದಲು ನಿಯಮಗಳನ್ನು ಓದಿ ಚರ್ಚಿಸಲು ಕಲಿಯಬೇಕೆಂದು ಅವರು ಒತ್ತಾಯಿಸಿದ್ದಾರೆ.