ನವದೆಹಲಿ: ಕಾರ್ನಿಯಾ, ಅಮೋನಿಯೋಟಿಕ್ ಪೊರೆಯ ಕಸಿ ಸೇರಿ ನೇತ್ರ ಚಿಕಿತ್ಸೆಗೆ ಬಳಸುವ ಸೂಕ್ಷ್ಮ ಜೈವಿಕ ಅಂಗಗಳನ್ನು ಡ್ರೋನ್ ಮೂಲಕ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸಾಗಿಸುವ ಬಗ್ಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಸಂಶೋಧನೆ ಆರಂಭಿಸಿದೆ ಎಂದು ಆರೋಗ್ಯ ಸಚಿವಾಲಯವು ತಿಳಿಸಿದೆ.
ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಮತ್ತು ಡಾ.ಶ್ರೋಫ್ ಅವರ ಚಾರಿಟಿ ಆಫ್ ಐ ಆಸ್ಪತ್ರೆ, ನಾಗರಿಕ ವಿಮಾನಯಾನ ಸಚಿವಾಲಯದ ಸಹಯೋಗದಲ್ಲಿ ಈ ಕಾರ್ಯಸಾಧ್ಯತಾ ಅಧ್ಯಯನ ನಡೆಸಲಾಗುತ್ತಿದೆ ಎಂದು ತಿಳಿಸಿದೆ.
ಕಾರ್ನಿಯಾವನ್ನು ಸೋನಿಪತ್‌ನಲ್ಲಿರುವ ಶ್ರೋಫ್ ಅವರ ಚಾರಿಟಿ ಐ ಆಸ್ಪತ್ರೆಯಿಂದ ಝಜ್ಜರ್‌ನಲ್ಲಿರುವ ನ್ಯಾಷನಲ್ ಕ್ಯಾನ್ಸರ್ ಸೆಂಟರ್‌ಗೆ ಡ್ರೋನ್ ಮೂಲಕ ಯಶಸ್ವಿಯಾಗಿ ಸಾಗಿಸಲಾಯಿತು. ರಸ್ತೆ ಮೂಲಕ ಸಾಗಿಸಲು ಸುಮಾರು 2.5 ತಾಸು ಬೇಕಾಗುತ್ತಿತ್ತು. ಆದರೆ ಡ್ರೋನ್ ಮೂಲಕ ಕೇವಲ 40 ನಿಮಿಷಗಳಲ್ಲಿ ಸಾಗಿಸಲಾಯಿತು ಎಂದು ಹೇಳಿಕೆಯು ತಿಳಿಸಿದೆ.