ಗುವಾಹಟಿ: ಮಣಿಪುರ ರಾಜ್ಯದಲ್ಲಿ ಜನರಿಗೆ ಮುಕ್ತ ಸಂಚಾರಕ್ಕೆ ಅವಕಾಶ ಇರಬೇಕು ಎಂದು ಕೇಂದ್ರ ಸರ್ಕಾರ ನೀಡಿರುವ ಸೂಚನೆಯ ವಿಚಾರವಾಗಿ ಕುಕಿ ಸಮುದಾಯದ ಸಂಘಟನೆಗಳು ಹಾಗೂ ಕೇಂದ್ರ ಗೃಹ ಸಚಿವಾಲಯದ ಪ್ರತಿನಿಧಿಗಳ ನಡುವೆ ನಡೆದ ಸಭೆಯು ಯಾವುದೇ ತೀರ್ಮಾನ ಕೈಗೊಳ್ಳಲು ವಿಫಲವಾಗಿದೆ.
ಚುರಾಚಾಂದ್‌ಪುರ ಜಿಲ್ಲಾಧಿಕಾರಿಯ ಕಚೇರಿಯಲ್ಲಿ ಮಂಗಳವಾರ ರಾತ್ರಿ ಮೂರು ತಾಸು ಸಭೆ ನಡೆಯಿತು ಎಂದು ಕುಕಿ ಸಂಘಟನೆಗಳ ಮೂಲಗಳು ಹೇಳಿವೆ. ಮಾರ್ಚ್ 8ರಂದು ಕಾಂಗ್‌ಪೋಕ್‌ಪಿ ಜಿಲ್ಲೆಯಲ್ಲಿ ಕುಕಿ ಸಮುದಾಯದ ಪ್ರತಿಭಟನಕಾರ ಮೃತಪಟ್ಟಿರುವ ವಿಚಾರವನ್ನು ಪ್ರಸ್ತಾಪಿಸಿ ಸಂಘಟನೆಗಳು, ಜಿಲ್ಲಾಧಿಕಾರಿಯ ಅಮಾನತಿಗೆ ಪಟ್ಟು ಹಿಡಿದವು.
ಮೈತೇಯಿ ಸಮುದಾಯದವರ ಜೊತೆಗಿನ ಸಂಘರ್ಷವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಪ್ರತ್ಯೇಕ ಆಡಳಿತ ವ್ಯವಸ್ಥೆಯನ್ನು ತಮಗೆ ಕಲ್ಪಿಸಬೇಕು ಎಂದು ಕೂಡ ಕುಕಿ ಪ್ರತಿನಿಧಿಗಳು ಒತ್ತಾಯಿಸಿದರು. ಮ್ಯಾನ್‌ಮಾರ್ ಜೊತೆಗೆ ಇದ್ದ ಮುಕ್ತ ಸಂಚಾರ ವ್ಯವಸ್ಥೆಯನ್ನು (ಎಫ್‌ಎಂಆರ್) ಮತ್ತೆ ಜಾರಿಗೆ ತರಬೇಕು ಎಂದು ಕೋರಿದರು.
ಸಭೆಯಲ್ಲಿ ಯಾವುದೇ ತೀರ್ಮಾನ ಆಗದ ಕಾರಣಕ್ಕೆ ಕುಕಿ ಸಂಘಟನೆಗಳು ಕೆಲವೆಡೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಸ್ತೆ ತಡೆ ಮುಂದುವರಿಸಿವೆ.