ಕೊಲಂಬೊ: ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್‌ನಲ್ಲಿ ಶ್ರೀಲಂಕಾಕ್ಕೆ ಭೇಟಿ ನೀಡಲಿದ್ದಾರೆ ಎಂದು ಶ್ರೀಲಂಕಾ ವಿದೇಶಾಂಗ ಸಚಿವ ವಿಜಿತಾ ಹೆರಾತ್ ಶನಿವಾರ ತಿಳಿಸಿದರು.
ಸಂಸತ್ತಿನಲ್ಲಿ ಬಜೆಟ್ ಮೇಲಿನ ಚರ್ಚೆಯ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, 'ನೆರೆಯ ಭಾರತದೊಂದಿಗೆ ನಾವು ನಿಕಟ ಸಂಬಂಧವನ್ನು ಹೊಂದಿದ್ದೇವೆ.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಭಾರತಕ್ಕೇ ಮೊದಲ ರಾಜತಾಂತ್ರಿಕ ಭೇಟಿ ನೀಡಲಾಯಿತು. ಈ ವೇಳೆ ದ್ವಿಪಕ್ಷೀಯ ಸಹಕಾರದ ಕುರಿತು ಹಲವು ಒಪ್ಪಂದಗಳನ್ನು ಮಾಡಿಕೊಂಡಿದ್ದೇವೆ' ಎಂದು ಹೇಳಿದರು.
'ಭಾರತದ ಪ್ರಧಾನಿ ಮೋದಿ ಅವರು ಮುಂದಿನ ತಿಂಗಳು ಇಲ್ಲಿಗೆ ಭೇಟಿ ನೀಡಲಿದ್ದಾರೆ. ಅವರ ಭೇಟಿಯ ಸಂದರ್ಭದಲ್ಲಿ ಸಾಂಪುರ್ ಸೌರ ವಿದ್ಯುತ್ ಘಟಕ ಯೋಜನೆ ಸೇರಿದಂತೆ ಅನೇಕ ಹೊಸ ಒಪ್ಪಂದಗಳಿಗೆ ಸಹಿ ಹಾಕಲಾಗುವುದು' ಎಂದರು. ಇದು ಶ್ರೀಲಂಕಾಕ್ಕೆ ಮೋದಿ ಅವರ 4ನೇ ಭೇಟಿಯಾಗಿರಲಿದೆ.
ಶ್ರೀಲಂಕಾದ ಸಿಲೋನ್ ಎಲೆಕ್ಟ್ರಿಸಿಟಿ ಬೋರ್ಡ್ ಹಾಗೂ ಭಾರತದ ಎನ್‌ಟಿಪಿಸಿ, ಟ್ರಿಂಕಮಲೀ ಜಿಲ್ಲೆಯ ಸಾಂಪುರ್‌ನಲ್ಲಿ 135 ಮೆಗಾ ವಾಟ್ ಸಾಮರ್ಥ್ಯದ ಸೌರ ವಿದ್ಯುತ್ ಘಟಕ ಸ್ಥಾಪಿಸಲು 2023ರಲ್ಲಿ ಒಪ್ಪಂದ ಮಾಡಿಕೊಂಡಿವೆ.