ಪೋರ್ಟ್ ಲೂಯಿಸ್: ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾರಿಷಸ್‌ಗೆ ಎರಡು ದಿನಗಳ ಪ್ರವಾಸ ಕೈಗೊಂಡಿದ್ದಾರೆ. ಅಲ್ಲಿನ ಭಾರತೀಯರು ಮೋದಿ ಅವರನ್ನು 'ಗೀತ್ ಗವಾಯಿ' ಸಾಂಪ್ರದಾಯಿಕ ಭೋಜ್‌ಪುರಿ ಸಂಗೀತದ ಮೂಲಕ ಸ್ವಾಗತಿಸಿದ್ದಾರೆ.
'ಗೀತ್ ಗವಾಯಿ' ಸಾಂಪ್ರದಾಯಿಕ ಭೋಜ್‌ಪುರಿ ಸಂಗೀತ ಮೇಳವಾಗಿದೆ.
ಇದು ಮಾರಿಷಸ್‌ನಲ್ಲಿ ಭೋಜ್‌ಪುರಿ ಮಾತನಾಡುವ ಭಾರತೀಯರು ಮದುವೆ ಪೂರ್ವ ಕಾರ್ಯಕ್ರಮದ ಸಂದರ್ಭಗಳಲ್ಲಿ ಸಂಗೀತ, ನೃತ್ಯ ಪ್ರದರ್ಶನವಾಗಿದೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಮೋದಿ, 'ಮಾರಿಷಸ್‌ನಲ್ಲಿರುವ ಭಾರತೀಯ ಸಮುದಾಯವು ಆತ್ಮೀಯವಾಗಿ ಸ್ವಾಗತಿಸಿದೆ. ಅವರಿಂದ ದೊರೆತ ಗೌರವಕ್ಕೆ ನಾನು ಭಾವುಕನಾಗಿದ್ದೇನೆ. ಭಾರತೀಯ ಪರಂಪರೆ, ಸಂಸ್ಕೃತಿ ಮತ್ತು ಮೌಲ್ಯಗಳು ಸ್ಪೂರ್ತಿದಾಯಕವಾಗಿದೆ. ಇವು ತಲೆ ತಲೆಮಾರುಗಳಿಂದ ಪ್ರವರ್ಧಮಾನಕ್ಕೆ ಬರುತ್ತಿದೆ ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಮೋದಿ ಮಾರಿಷಸ್‌ಗೆ ಎರಡು ದಿನಗಳ ಪ್ರವಾಸ ಕೈಗೊಂಡಿದ್ದು, ಈ ಸಂದರ್ಭದಲ್ಲಿ ಅವರು ಸಾಮರ್ಥ್ಯ ವೃದ್ಧಿಯಿಂದ ಹಿಡಿದು ಸಮುದಾಯ ಸಂಬಂಧಿತ ಮೂಲಸೌಕರ್ಯದವರೆಗೆ ಭಾರತ ಅನುದಾನಿತ 20ಕ್ಕೂ ಹೆಚ್ಚು ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಡರಾತ್ರಿ ಮಾರಿಷಸ್‌ಗೆ ತೆರಳಿರುವ ಪ್ರಧಾನಿ ಮೋದಿ, ಈ ಭೇಟಿಯು ಉಭಯ ರಾಷ್ಟ್ರಗಳ ನಡುವಿನ ಸಂಬಂಧಗಳಲ್ಲಿ ಹೊಸ ಮತ್ತು ಪ್ರಕಾಶಮಾನವಾದ ಅಧ್ಯಾಯವನ್ನು ತೆರೆಯುತ್ತದೆ ಎಂದು ಹೇಳಿದ್ದಾರೆ.