ನವದೆಹಲಿ: ತಮ್ಮ ವೈಫಲ್ಯಗಳಿಗೆ ಇತರರನ್ನು ದೂಷಿಸುವ ಮೊದಲು ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ತಾವೇ ಕಾರಣ ಎಂಬುದನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅರ್ಥಮಾಡಿಕೊಳ್ಳಬೇಕು ಎಂದು ಬಿಜೆಪಿ ಆರೋಪಿಸಿದೆ.
ಎರಡು ದಿನಗಳ ಗುಜರಾತ್ ಭೇಟಿಯ ವೇಳೆ ರಾಹುಲ್ ತಮ್ಮದೇ ಪಕ್ಷದ ನಾಯಕರಿಗೆ ಛೀಮಾರಿ ಹಾಕಿರುವುದರ ಕುರಿತು ಬಿಜೆಪಿ ಪ್ರತಿಕ್ರಿಯೆ ನೀಡಿದೆ.
ಬಿಜೆಪಿಗಾಗಿ ಕೆಲಸ ಮಾಡುವ ಪಕ್ಷದ ನಾಯಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ರಾಹುಲ್ ಎಚ್ಚರಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ, 'ರಾಹುಲ್ ಗಾಂಧಿ ತಮ್ಮನ್ನು ತಾವೇ ಟ್ರೋಲ್ ಮಾಡಿದ್ದಾರೆ. ತಮ್ಮ ವೈಫಲ್ಯಗಳಿಗೆ ಖರ್ಗೆ ಮತ್ತು ಪಕ್ಷದ ಕಾರ್ಯಕರ್ತರನ್ನು ದೂಷಿಸುತ್ತಿದ್ದಾರೆ' ಎಂದು ಹೇಳಿದ್ದಾರೆ.
'ಚುನಾವಣೆಯಲ್ಲಿ ಪಕ್ಷವನ್ನು ಸೋಲಿಸುವುದು ಒಂದು ಕಲೆಯಾಗಿದ್ದರೆ, ರಾಹುಲ್ ಗಾಂಧಿ ಅದರ ಕಲಾವಿದ ಆಗಿರುತ್ತಾನೆ' ಎಂದು ವ್ಯಂಗ್ಯವಾಡಿದ್ದಾರೆ.
'ಇವಿಎಂ, ಚುನಾವಣಾ ಆಯೋಗ, ಮತದಾರರ ಪಟ್ಟಿ ಮತ್ತು ಪಕ್ಷದ ಕಾರ್ಯಕರ್ತರನ್ನು ದೂಷಿಸುವ ಬದಲು ತಾವೇಕೆ ನಿಷ್ಕ್ರಿಯ ಆಸ್ತಿಯಾಗಿ ಮಾರ್ಪಾಟ್ಟಿದ್ದಾರೆ ಎಂಬುದರ ಕುರಿತು ರಾಹುಲ್ ಮೌಲ್ಯಮಾಪನ ಮಾಡಿಕೊಳ್ಳಬೇಕು' ಎಂದು ಹೇಳಿದ್ದಾರೆ.